ಆಸ್ರಣ್ಣ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಆಯ್ಕೆ

ಹೊಸ ದಿಗಂತ ವರದಿ, ಮಂಗಳೂರು:

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಅವರ ಸಂಸ್ಮರಣಾರ್ಥ ನೀಡಲಾಗುವ ‘ಆಸ್ರಣ್ಣ ಪ್ರಶಸ್ತಿ-2022′ ಕ್ಕೆ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಆಯ್ಕೆಯಾಗಿದ್ದಾರೆ.
ಆಸ್ರಣ್ಣ ಶಿಷ್ಯವೃಂದ, ಕದ್ರಿ ಮಂಗಳೂರು ಇವರು ಕೊಡಮಾಡುವ ಈ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 18ರಂದು ಸಂಜೆ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಜರಗಲಿದೆ. ಕಳೆದ 5 ದಶಕಗಳಿಂದ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರನಾಗಿ ಕಲಾರಸಿಕರ ಮನಗೆದ್ದಿರುವ ಖ್ಯಾತ ವಿದೂಷಕ ಜಯರಾಮ ಆಚಾರ್ಯರು, ಅಮ್ಟಾಡಿ, ಸುಂಕದಕಟ್ಟೆ, ಸ್ವರ್ನಾಡು, ಕಟೀಲು, ಪುತ್ತೂರು, ಕದ್ರಿ, ಕುಂಬ್ಳೆ, ಸುರತ್ಕಲ್, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿರುವ ಅನುಭವಿ ಕಲಾವಿದ.
ಪಡ್ರೆ ಚಂದು, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರಿಂದ ಯಕ್ಷಗಾನದ ಮಾರ್ಗದರ್ಶನ ಪಡೆದಿರುವ ಆಚಾರ್ಯರು ವಿಜಯ, ಮಕರಂದ, ದಾರುಕ, ಬಾಹುಕ, ರಕ್ಕಸ ದೂತ, ನಾರದ ಮುಂತಾದ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿರುವ ಜತೆಗೆ ತುಳು ಯಕ್ಷಗಾನ ಪ್ರಸಂಗಗಳಲ್ಲೂ ತನ್ನ ವಿಶಿಷ್ಟಪೂರ್ಣ ಹಾಸ್ಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅನೇಕ ಬಾರಿ ವಿದೇಶದಲ್ಲೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾಲ್ಗೊಂಡಿರುವ ಇವರು ಯಕ್ಷಗಾನ ಮಾತ್ರವಲ್ಲದೆ, ರಂಗಭೂಮಿ, ಚಲನಚಿತ್ರಗಳಲ್ಲೂ ನಟಿಸುವ ಮೂಲಕ ಪ್ರಸಿದ್ದಿ ಗಳಿಸಿದ್ದಾರೆ ಎಂದು ಗೋಪಾಲಕೃಷ್ಣ ಆಸ್ರಣ್ಣ ಶಿಷ್ಯವೃಂದ ಕದ್ರಿ ಇದರ ಸಂಚಾಲಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!