ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿದ್ದು ಗಂಭೀರ ಗಾಯಗೊಂಡ 16 ತಿಂಗಳ ಪುಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಪೋಷಕರು ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ಮಕ್ಕಳ ಜೀವ ಉಳಿಸಿದ್ದಾರೆ. ಆ ಮೂಲಕ ತಮ್ಮ ಮಗುವಿನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆಗಸ್ಟ್ 17ರಂದು ಗಾಯಗೊಂಡಿದ್ದ 16 ತಿಂಗಳ ರಿಶಾಂತ್‌ನನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆ. 25ರಂದು ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದ್ದರು. ಮಗನನ್ನು ಕಳೆದುಕೊಳ್ಳುವ ದುಃಖದ ನಡುವೆಯೂ ಪೋಷಕರು ಮಗುವಿನ ಮೂತ್ರಪಿಂಡ ಮತ್ತು ಯಕೃತ್ತನ್ನು ಇಬ್ಬರು ಮಕ್ಕಳಿಗೆ ದಾನ ಮಾಡಲು ನಿರ್ಧರಿಸಿದರು. ಅಲ್ಲದೇ ಮಗುವಿನ ಹೃದಯದ ಕವಾಟಗಳು ಮತ್ತು ಕಾರ್ನಿಯಾಗಳನ್ನು ಅಂಗಾಂಗ ಬ್ಯಾಂಕ್‌ನಲ್ಲಿ ಸಂರಕ್ಷಿಸಿಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ಮೃತ ಮಗುವಿನ ಮೂತ್ರ ಪಿಂಡಗಳನ್ನು ಕಸಿ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಏಮ್ಸ್‌ನಲ್ಲಿ ಇದುವರೆಗೆ ಅಂಗಾಂಗ ದಾನ ಮಾಡಿದ ಅತಿ ಕಿರಿಯ ದಾನಿ ರಿಶಾಂತ್ ಈ ಪುಟ್ಟ ಮಗು ಎಂದು ವೈದ್ಯರು ಹೇಳಿದ್ದಾರೆ.