ಹೊಸ ದಿಗಂತ ವರದಿ, ಅಂಕೋಲಾ:
ಬಡತನದ ಕಾರಣದಿಂದ ಮಹಿಳೆಯೋರ್ವಳು ಹುಟ್ಟಿದ ಮಗುವನ್ನು ಆಸ್ಪತ್ರೆಯ ನರ್ಸ್ ಸಹಾಯದಿಂದ ಬೇರೆಯವರಿಗೆ ಹಣ ಪಡೆದು ಸಾಕಲು ನೀಡಿ ನಂತರ ತನ್ನ ಮಗು ತನಗೆ ಕೊಡಿಸಿ ಎಂದು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಮನವಿ ನೀಡಿದ್ದು ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಟ್ಟಣದ ಅಜ್ಜಿಕಟ್ಟಾದ ಮಹಿಳೆ ಪ್ರೇಮಾ ಗಣೇಶ ಆಗೇರ (35) ಎಂಬಾಕೆ ಸೆಪ್ಟೆಂಬರ್ 5 ರಂದು ಕಾರವಾರ ಸಿವಿಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಬಡತನದ ಕಾರಣ ಮಗುವಿಗೆ ಯಾರಿಗಾದರೂ ಸಾಕಲು ಕೊಡುವುದಾಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ಎನ್ನುವವರಿಗೆ ತಿಳಿಸಿದ್ದುಳು ಎನ್ನಲಾಗಿದ್ದು ಸೆಪ್ಟೆಂಬರ್ 15 ರಂದು ಅಂಕೋಲಾ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಭಟ್ಕಳದ ಶ್ರೀಧರ ವೆಂಕಯ್ಯ ನಾಯ್ಕ ಎನ್ನುವವರಿಂದ 1 ಲಕ್ಷ ರೂಪಾಯಿ ನಗದು ಮತ್ತು 70 ಸಾವಿರ ರೂಪಾಯಿ ಚೆಕ್ ಪಡೆದು ಮಗುವನ್ನು ಸಾಕಲು ಮಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕೆಲವು ದಿನಗಳ ನಂತರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಮಗುವಿನ ತಾಯಿ ನಡೆದ ವಿಷಯವನ್ನು ತಿಳಿಸಿ ಮಗುವನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಪ್ರಭಾರ ಸಿ.ಡಿ.ಪಿ.ಓ ಸವಿತಾ ಸಿದ್ಧಯ್ಯ ಶಾಸ್ತ್ರಿಮಠ ಎನ್ನುವವರು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು ಅಂಕೋಲಾ ಪೊಲೀಸರು ಮಗುವಿನ ತಾಯಿ ಪ್ರೇಮಾ ಗಣೇಶ ಆಗೇರ, ಮಗುವನ್ನು ಸಾಕಲು ಪಡೆದ ಶ್ರೀಧರ ನಾಯ್ಕ ಮತ್ತು ಈ ವಿಷಯದಲ್ಲಿ ಪಾಲ್ಗೊಂಡಿದ್ದ ನರ್ಸ್ ಅಶ್ವಿನಿ ಎನ್ನುವವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.