ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮೈಸೂರಿನ ದಸರಾ ಎಲ್ಲರಿಗೂ ಚಿರಪರಿಚಿತ. ಒಂಭತ್ತು ದಿನಗಳ ಕಾಲ ನಡೆಯುವ ದಸರಾ ಉತ್ಸವದ ಆಚಾರ-ವಿಚಾರ ಹೇಗಿರುತ್ತೆ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ, ರಾಜರ ಖಾಸಗಿ ದರ್ಬಾರ್, ಬನ್ನಿ ಮರಕ್ಕೆ ಪೂಜೆ, ಸೇರಿದಂತೆ ಗತಕಾಲದ ವೈಭವದ ಮೆರುಗು ಧರೆಗಿಳಿರುತ್ತದೆ. ಆಯುಧಪೂಜಾ, ಜಂಬೂಸವಾರಿ ನಡೆಸಿ, ಪಂಜಿನ ಕವಾಯತು ಮಾಡುವುದರ ಮೂಲಕ ಮೈಸೂರು ದಸರಾಗೆ ತೆರೆ ಎಳೆಯಲಾಗುತ್ತದೆ.
ಮೈಸೂರಷ್ಟೇ ಅಲ್ಲದೆ, ಇಡೀ ದೇಶಾದ್ಯಂತ ನವರಾತ್ರಿ ಸಂಭ್ರಮಾಚರಣೆ ನಡೆಯುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ವಿಶೇಷವಾಗಿ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀರಾಮಲೀಲಾ ಆಚರಣೆ ಮಾಡಲಾಗುತ್ತದೆ. ಭಗವಾನ್ ರಾಮನನ್ನು ಪೂಜಿಸುವ ಈ ರಾಜ್ಯಗಳಲ್ಲಿ ರಕ್ಕಸ ರಾವಣನನ್ನು ರಾಮ ಸಂಹಾರ ಮಾಡುವ 9ನೇ ದಿನ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ, ರಾವಣನ ಮೇಲೆ ರಾಮನ ವಿಜಯದ ಕಥೆಯನ್ನು ಸಹ ನಾಟಕಗಳ ಮೂಲಕ ಅಭಿನಯಿಸಲಾಗುತ್ತದೆ. ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಸ್ಮರಿಸಲು ದಸರಾದಂದು ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಈ ಒಂಭತ್ತೂ ದಿನಗಳು ವಿಧವಿಧವಾದ ಸಿಹಿ ಖಾದ್ಯಗಳನ್ನು ತಯಾರು ಮಾಡುತ್ತಾರೆ.
ನವರಾತ್ರಿಯ ಹತ್ತನೇ ದಿನ ವಿಜಯದಶಮಿಯಂದು ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಮತ್ತು ಬಿಹಾರಗಳಲ್ಲಿ ದೇವಿ ಆರಾಧನೆ ಮಾಡುತ್ತಾರೆ. ಶಕ್ತಿಮಾತೆ ದುರ್ಗೆಯ ಮಣ್ಣಿನ ಪ್ರತಿಮೆಗಳನ್ನು ಮಾಡಿ ಲಲಿತಾ ಸಹಸ್ರನಾಮ, ದುರ್ಗಾ ಸಪ್ತಶತಿ ಸ್ತೋತ್ರಗಳನ್ನು ಪಠಿಸುತ್ತಾರೆ. ಮುಖ್ಯವಾಗಿ ಗುಜರಾತ್‌ನಲ್ಲಿ ದೇವಿಯ ದೇವಾಲಯಗಳಲ್ಲಿ ಸ್ತ್ರೀ-ಪುರುಷರಿಬ್ಬರೂ ಸೇರಿ ʻಗರ್ಬಾʼ ನೃತ್ಯ ಮಾಡುತ್ತಾರೆ. ಕೊನೆಯ ದಿನ ವಿದ್ಯುಕ್ತವಾಗಿ ದುರ್ಗೆಯ ಮಣ್ಣಿನ ಪ್ರತಿಮೆಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಎಳೆಯುತ್ತಾರೆ.