ಕಾಮಾಖ್ಯ ದೇವಾಲಯದಲ್ಲಿ ಹೇಗಿರುತ್ತದೆ ನವರಾತ್ರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯ ಈ ಶುಭದಿನಗಳಲ್ಲಿ ದೇವಾಲಯಗಳಿಗೆ ತೆರಳಿ ದುರ್ಗಾದೇವಿಯ ದರ್ಶನ ಪಡೆಯಲು ಭಕ್ತರು ಧಾವಿಸುತ್ತಿದ್ದಾರೆ. ಈ ಒಂಬತ್ತು ದಿನಗಳಲ್ಲಿ ದೇಶದ ಎಲ್ಲಾ ದುರ್ಗಾದೇವಿ ದೇವಾಲಯಗಳಲ್ಲಿ ಪ್ರತಿದಿನ ವಿಶೇಷ ಪೂಜೆ, ದೇವಿ ಅಲಂಕಾರಗಳು ನೆರವೇರುತ್ತದೆ.

ದೇಶದಲ್ಲಿರುವ ಪ್ರಮುಖವಾದ ದುರ್ಗಾದೇವಿಗಳ ದೇವಾಲಯಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ  ದೇವಾಲಯವೂ ಒಂದು. ನವರಾತ್ರಿ ಸಂದರ್ಭದಲ್ಲಿ ದೇವಿ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದು, ಇಂದಿನಿಂದ ದೇವಾಲಯದಲ್ಲಿ ನವರಾತ್ರಿ ಪೂಜೆ ಆರಂಭವಾಗಿದೆ ಎಂದು ಅರ್ಚಕರು ಹೇಳಿದ್ದಾರೆ.

ಕುಮಾರಿ ಪೂಜೆಗೂ ಇದು ಸಕಾಲ, ಇಂದು ಪ್ರತಿಪದ, ಒಬ್ಬ ಕುಮಾರಿಯನ್ನು ಪೂಜಿಸಲಾಗುತ್ತದೆ. ನಾಳೆ ದ್ವಿತೀಯ ತಿಥಿಯಾಗಿದ್ದು, ಇಬ್ಬರು ಕುಮಾರಿಯರನ್ನು ಪೂಜಿಸಲಾಗುವುದು ಎಂದಿದ್ದಾರೆ. ಇದೇ ರೀತಿ 45 ಕುಮಾರಿಯರಿಗೆ ನವಮಿವರೆಗೆ ಪೂಜೆ ಸಲ್ಲಿಸಲಾಗುವುದು. ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಬಂದಿದ್ದು, 15 ದಿನಗಳ ವಿಶೇಷ ದುರ್ಗಾಪೂಜೆ ನಡೆಯಲಿದೆ.

ಕಾಮಾಖ್ಯ ದೇವಾಲಯ ಹಿನ್ನೆಲೆ ಏನು?

ಸತಿಯು ತನ್ನ ತಂದೆ ರಾಜ ದಕ್ಷನನ್ನು ವಿರೋಧಿಸಿ ಭಗವಾನ್ ಶಿವನನ್ನು ವರಿಸಿರುತ್ತಾಳೆ. ಒಂದು ಬಾರಿ ದಕ್ಷ ರಾಜ ಅರಮನೆಯಲ್ಲಿ ಯಜ್ಞವೊಂದನ್ನು ಏರ್ಪಡಿಸಿದ್ದು, ಇಲ್ಲಿ ಮಗಳಿಗೆ ಆಹ್ವಾನವಿಲ್ಲ. ತಂದೆ ಕರೆಯದಿದ್ದರೂ ಯಜ್ಞಕ್ಕೆ ಸತಿ ತಲುಪುತ್ತಾಳೆ. ದಕ್ಷರಾಜ ಶಿವನ ವಿರುದ್ಧ ಮಾತನಾಡಿ ಆತನನ್ನು ಅವಮಾನಿಸುತ್ತಾನೆ. ಇದರಿಂದ ಅತೀವ ನೋವುಂಡ ಸತಿ ಯಜ್ಞಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.

ಈ ಬಗ್ಗೆ ಅರಿತ ಶಿವ ಕೆಂಡಾಮಂಡಲವಾಗುತ್ತಾನೆ. ತನ್ನ ಪತ್ನಿಯ ಮೃತದೇಹವನ್ನು ಕೈಯಲ್ಲೇ ಹಿಡಿದು ಪ್ರಳಯ ರುದ್ರತಾಂಡವ ಮಾಡುತ್ತಾನೆ. ಇದರ ಪರಿಣಾಮ ಅರಿತ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹ ಛಿದ್ರಗೊಳಿಸುತ್ತಾನೆ. ಶರೀರದ ಚೂರು ಚೂರುಗಳು ಎಲ್ಲೆಲ್ಲಿಯೋ ಬೀಳುತ್ತವೆ. ಬಿದ್ದ ಜಾಗಗಳನ್ನು ಶಕ್ತಿ ಪೀಠಗಳು ಎನ್ನಲಾಗುತ್ತದೆ. ಪ್ರಮುಖ ದೇವಾಲಯದಲ್ಲಿ ಯೋನಿಯ ಭಾಗ ಬಿದ್ದಿದ್ದು, ಅದಕ್ಕೆ ಪೂಜೆ ನೆರವೇರುತ್ತದೆ. ವರ್ಷಕ್ಕೊಮ್ಮೆ ದೇವಿಯ ಋತುಸ್ರಾವವನ್ನು ಇಲ್ಲಿ ಆಚರಿಸಲಾಗುತ್ತದೆ. ಇದು ಅತ್ಯಂತ ಶಕ್ತಿಯ ಕ್ರೋಢೀಕರಣದ ಸಮಯ ಎಂದು ನಂಬಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!