ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಸಮೀಪಿಸುತ್ತಿದ್ದಂತೆ, ಬಹುನಿರೀಕ್ಷಿತ ಅಧಿಕಾರ ಹಂಚಿಕೆಯ ರಣರೋಚಕ ‘ಧಾರಾವಾಹಿ’ ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿತ ಸಚಿವರು ಮತ್ತು ಶಾಸಕರು ಶಕ್ತಿ ಪ್ರದರ್ಶನಕ್ಕಾಗಿ ದಿಢೀರ್ ದೆಹಲಿಗೆ ಹಾರಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಡಿಕೆಶಿ ಬಣದಿಂದ ದೆಹಲಿ ಯಾತ್ರೆ, ಅಲರ್ಟ್ ಆದ ಸಿಎಂ
ಈ ಬಣದ ನಾಯಕತ್ವವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಹಿಸಿಕೊಂಡಿದ್ದಾರೆ. ಚಲುವರಾಯಸ್ವಾಮಿ ಅವರು ದೆಹಲಿಗೆ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅಲರ್ಟ್’ ಆಗಿದ್ದಾರೆ.
ಮೈಸೂರು ವಾಸ್ತವ್ಯ ರದ್ದು:
ಸಿಎಂ ಸಿದ್ದರಾಮಯ್ಯ ಅವರು ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ, ಸಚಿವ-ಶಾಸಕರ ದೆಹಲಿ ಯಾತ್ರೆಯ ಹಿನ್ನೆಲೆಯಲ್ಲಿ ಸಿಎಂ ತಮ್ಮ ಮೈಸೂರು ವಾಸ್ತವ್ಯವನ್ನು ದಿಢೀರ್ ರದ್ದುಗೊಳಿಸಿದ್ದಾರೆ.
ತುರ್ತು ಸಭೆ:
ದೆಹಲಿ ಯಾತ್ರೆಗೆ ಪ್ರತಿದಾಳವಾಗಿ, ಸಿಎಂ ನಾಳೆ ಬೆಳಗ್ಗೆ 10:30ಕ್ಕೆ ತಮ್ಮ ಕಾವೇರಿ ನಿವಾಸದಲ್ಲಿ ಕೃಷಿ ಸಚಿವರ ತುರ್ತು ಸಭೆ ಕರೆದಿದ್ದಾರೆ. ಈ ಸಂಬಂಧ ಸೂಚನಾ ಪತ್ರವನ್ನೂ ಹೊರಡಿಸಲಾಗಿದೆ.
‘ಮೆಕ್ಕೆಜೋಳ’ ಹೆಸರಿನಲ್ಲಿ ‘ಒಗ್ಗಟ್ಟು ಒಡೆಯುವ’ ತಂತ್ರ!
ಸಿಎಂ ಕರೆದಿರುವ ಈ ತುರ್ತು ಸಭೆಯು ಹೆಸರಿಗೆ ಮೆಕ್ಕೆಜೋಳ ಖರೀದಿಸುವ ಸಂಬಂಧ ನಡೆದರೂ, ಇದರ ಹಿಂದಿನ ಉದ್ದೇಶವು ದೆಹಲಿ ಯಾತ್ರೆ ಕೈಗೊಂಡಿರುವ ಬಣದ ಒಗ್ಗಟ್ಟನ್ನು ಮುರಿಯುವುದೇ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಚಲುವರಾಯಸ್ವಾಮಿ ಅವರನ್ನು ಸಮಾಧಾನಪಡಿಸಲು ಸಿಎಂ ಸಿದ್ದರಾಮಯ್ಯ ತಂತ್ರ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಡಿ.ಕೆ. ಶಿವಕುಮಾರ್ ಬಣದ ನಾಯಕತ್ವ ವಹಿಸಿ ದೆಹಲಿಗೆ ತಲುಪಿರುವ ಚಲುವರಾಯಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ಅವರ ತುರ್ತು ಸಭೆಯ ಕರೆಯ ಹಿನ್ನೆಲೆಯಲ್ಲಿ ದೆಹಲಿಯಿಂದ ಮತ್ತೆ ಬೆಂಗಳೂರಿಗೆ ಮರಳುತ್ತಾರೆಯೇ? ಅಥವಾ ಸಿಎಂರ ಈ ಪ್ರಯತ್ನವನ್ನು ನಿರ್ಲಕ್ಷಿಸಿ ತಮ್ಮ ಶಕ್ತಿ ಪ್ರದರ್ಶನವನ್ನು ಮುಂದುವರಿಸುತ್ತಾರೆಯೇ? ಎಂಬುದು ರಾಜ್ಯ ರಾಜಕೀಯದಲ್ಲಿ ಈಗ ಹೆಚ್ಚಿರುವ ದೊಡ್ಡ ಪ್ರಶ್ನೆಯಾಗಿದೆ.

