ಅದ್ದೂರಿ ಜಂಬೂ ಸವಾರಿ ಮೆರವಣಿಗೆ: ಚಾಮುಂಡೇಶ್ವರಿ ಅಂಬಾರಿ ಹೊತ್ತ ಮಹೇಂದ್ರ ಗಾಂಭೀರ್ಯದ ನಡಿಗೆ!

ಹೊಸದಿಗಂತ ವರದಿ,ಶ್ರೀರಂಗಪಟ್ಟಣ :

ಶ್ರೀರಂಗಪಟ್ಟಣಲ್ಲಿ ಜಂಬೂ ಸವಾರಿ ಮೆರವಣಿಗೆಯೂ ಅದ್ದೂರಿಯಾಗಿ ನೆರವೇರಿತು. ಶ್ರೀಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಜ ಗಾಂಭೀರ್ಯದ ನಡಿಗೆ ಮೂಲಕ ಜಂಬೂ ಸವಾರಿಯ ಕೇಂದ್ರ ಬಿಂದುವೆನಿಸಿತು. ಮಹೇಂದ್ರನಿಗೆ ವಿಜಯ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ವೈಭವವನ್ನು ನೆನಪಿಸಿತು.
ಕಿರಂಗೂರು ಬನ್ನಿಮಂಟಪದ ಬಳಿ ಮದ್ಯಾಹ್ನ 4 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ವಿಶೇಷ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ಬನ್ನಿಮಂಟಪದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ಮೊದಲಿಗೆ ಸ್ಥಳಶುದ್ಧಿ, ಗಣಪತಿ ಹೋಮ, ಪುಣ್ಯಾಹ, ದುರ್ಗಾಶಪ್ತಸತಿ ಪಾರಾಯಣ, ಬನ್ನಿಪೂಜೆ, ಶತವೃದ್ರಪಾರಾಯಣ, ಕೂಷ್ಮಾಂಡ ಛೇದನ, ಮಹಾಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶಾಸಕ ರವೀಂದ್ರ ಶ್ರೀಕಂಠಯ್ಯ ದಂಪತಿಗಳ ಸಮೇತ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಬನ್ನಿಮಂಟಪದಿಂದ ಹೊರಟ ಅಂಬಾರಿ ಮೆರವಣಿಗೆಯು ಕಿರಂಗೂರು, ಬಾಬುರಾಯನಕೊಪ್ಪಲು ಮಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ಮುಖ್ಯ ದ್ವಾರವನ್ನು ಪ್ರವೇಶಿಸಿದವು. ಪಟ್ಟಣದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಜನಸ್ತೋಮವು ಅಂಬಾರಿ ಮೆರವಣಿಗೆ ಹಾಗೂ ಕಲಾತಂಡಗಳ ಸೊಬಗನ್ನು ಕಣ್ತುಂಬಿಕೊಂಡರು. ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯದ ಬಳಿ ನಿರ್ಮಾಣಗೊಂಡಿರುವ ಶ್ರೀರಂಗ ವೇದಿಕೆ ಬಳಿ ಮೆರವಣಿಗೆಯನ್ನು ಅಂತ್ಯಗೊಳಿಸಲಾಯಿತು.
ಮೆರವಣಿಗೆಯಲ್ಲಿ ಪೂಜಾಕುಣಿತ, ಡೊಳ್ಳುಕುಣಿತ, ಪೊಲೀಸ್ ಬ್ಯಾಂಡ್, ಅಶ್ವದಳ, ವೀರಗಾಸೆ, ಗೊಂಬೆಕುಣಿತ, ಕಂಸಾಳೆ, ಕೊಂಬುಕಹಳೆ, ಚಿಲಿಪಿಲಿಗೊಂಬೆ, ನಂದಿದ್ವಜ, ನಾದಸ್ವರ, ಕೋಲಾಟ, ನಾಸಿಕ್ ಬ್ಯಾಂಡ್, ಯಕ್ಷಗಾನ, ದೊಣ್ಣೆವರೆಸೆ, ಹೆನ್ ಆಕ್ಟ್, ಕೇಳರ ಥೈಯಂ, ಲೋಟಸ್ ಡ್ಯಾಸ್ಸ್ ಹ್ಯಾಂಟ್, ವೈಲಿಂಗ್ ಗರ್ಸ್‌, ಪಿಕಾಕ್ ಡ್ಯಾಸ್, ಲಂಬಾಣಿನೃತ್ಯ, ಕತಕ್‌ಕಳಿ, ಮೋಹಿನಿಆಟ್ಟಂ, ದಾಂಡ್ಯ ನೃತ್ಯ, ಮಣಿಪುರ್ ನೃತ್ಯ, ವಿದೇಶಿ ಕಲಾವಿದರಿಂದ ಗೋವ ಕಾರ್ನಿಂಗ್ ವಾಲ್ ಪ್ರದರ್ಶನ, ಮಿರರ್ ಮ್ಯಾನ್, ಚೈನಿಸ್ ಲಯನ್, ಹ್ಯಾಲೋ ಮ್ಯಾನ್, ಕೇರಳ ದಂಡೆ ವಾದ್ಯ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಗಮನ ಸೆಳೆದವು. ವಿವಿಧ ಇಲಾಖೆಗಳಿಂದ ಸಾಮಾಜಿಕ ಕಾಳಜಿಯುಳ್ಳ ಹತ್ತಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಸಾಗಿದವು. ಪೋಲೀಸ್ ಇಲಾಖೆ ಏರ್ಪಡಿಸಿದ್ದ ಹೆಲ್ಮೆಟ್ ಕಡ್ಡಾಯ ಇಲ್ಲದಿದ್ದರೆ ಯಮಲೋಕಕ್ಕೆ ಪಯಣ ಖಚಿತ ಎಂಬ ಸ್ತಬ್ದ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!