ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ʻನೋ ಸಿದ್ದರಾಮಯ್ಯ, ನೋ ಕಾಂಗ್ರೆಸ್ʼ ಎಂಬ ಸ್ಪೋಟಕ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಕ್ಕೆ ಟಾಂಗ್ ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ಪ್ರಬಲವಾಗಿ ಪ್ರತಿಪಾದಿಸಿದರು. “ನೋ ದೇವೇಗೌಡ, ನೋ ಜೆಡಿಎಸ್; ನೋ ಯಡಿಯೂರಪ್ಪ, ನೋ ಬಿಜೆಪಿ; ಅದೇ ರೀತಿ, ಸಿದ್ದರಾಮಯ್ಯ ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಇಲ್ಲ” ಎಂದು ಅವರು ಖಚಿತವಾಗಿ ನುಡಿದರು.
ಸಿಎಂ ಅಧಿಕಾರಾವಧಿ ಬಗ್ಗೆ ವಿಶ್ವಾಸ:
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಖಂಡಿತಾ ಪೂರೈಸುತ್ತಾರೆ ಎಂಬ ವಿಶ್ವಾಸವನ್ನು ರಾಜಣ್ಣ ವ್ಯಕ್ತಪಡಿಸಿದರು. “ಇದರಲ್ಲಿ ಯಾವುದೇ ಅನುಮಾನವಿಲ್ಲ. ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ,” ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ವದಂತಿಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.
ಸರ್ಕಾರದ ಸ್ಥಿರತೆಯೇ ಮುಖ್ಯ:
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ ಅವರು, “ಆಸೆ ಎಲ್ಲರಿಗೂ ಇರುತ್ತದೆ, ಅದು ನಿಜ. ಆದರೆ, ನಾನು ಮಂತ್ರಿಯಾಗುವುದು ಮುಖ್ಯವಲ್ಲ, ಸರ್ಕಾರವು ಸುಭದ್ರವಾಗಿರುವುದು ಮುಖ್ಯ,” ಎಂದು ಹೇಳುವ ಮೂಲಕ ಸರ್ಕಾರದ ಸ್ಥಿರತೆಯ ಮೇಲೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ರಾಜಣ್ಣ ಅವರ ಈ ಹೇಳಿಕೆಯು ರಾಜ್ಯ ಕಾಂಗ್ರೆಸ್ ಒಳಗೆ ನಾಯಕತ್ವದ ವಿಷಯದಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಪೈಪೋಟಿಗೆ ಮತ್ತಷ್ಟು ಪುಷ್ಠಿ ನೀಡಿದೆ.

