ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಶದೀಪ್, ದೀಪಕ್ ಚಹಾರ್ ಹಾಗೂ ಹರ್ಷಲ್ ಪಟೇಲ್ ದಾಳಿಗೆ ಸೌತ್ ಆಫ್ರಿಕಾ ಘಟಾನುಘಟಿ ಬ್ಯಾಟ್ಸ್ಮನ್ಗಳು ಒಂದಂಕಿಗೆ ಪೆವಿಲಿಯನ್ ಸೇರಿದ್ದು, ಇದರ ಪರಿಣಾಮ ಭಾರತ ವಿರುದ್ಧದ ಮೊದಲಪಂದ್ಯದಲ್ಲಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಮೊದಲ ಓವರ್ನಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ತೆಂಬಾ ಬುವುಮಾ ಖಾತೆ ತೆರೆಯುವ ಮುನ್ನವೇ ಔಟಾದರು. ಎರಡನೇ ಓವರ್ನಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಪತನಗೊಂಡಿತು. 1 ರನ್ಗಳಿಸುವಷ್ಟರಲ್ಲೇ ಸೌತ್ ಆಫ್ರಿಕಾ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ ಬೆನ್ನಲ್ಲೇ ರೀಲೆ ರೋಸೋ ಡಕೌಟ್ ಆದರು.
ಆ್ಯಡಿನ್ ಮಕ್ರಮ್ ಹೋರಾಟದ ಸೂಚನೆ ನೀಡಿದರೂ.ಇತರ ಬ್ಯಾಟ್ಸ್ಮನ್ಗಳು ಸಾಥ್ ನೀಡಲಿಲ್ಲ. ಡೇವಿಡ್ ಮಿಲ್ಲರ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಡಕೌಟ್ ಆದರು. ಆ್ಯಡಿನ್ ಮಕ್ರಮ್ 25 ರನ್ ಸಿಡಿಸಿ ಔಟಾದರು. 42 ರನ್ ಸಿಡಿಸುವಷ್ಟರಲ್ಲೇ ಸೌತ್ ಆಫ್ರಿಕಾ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ವೇಯ್ನ್ ಪಾರ್ನೆಲ್ ಹಾಗೂ ಕೇಶವ್ ಮಹಾರಾಜ್ ಜೊತೆಯಾಟ ಸೌತ್ ಆಫ್ರಿಕಾ ತಂಡಕ್ಕೆ ಕೊಂಚ ಸಮಾಧಾನ ತಂದಿತು.
ವೇಯ್ನ್ ಪಾರ್ನೆಲ್ 24 ರನ್ ಸಿಡಿಸಿ ಔಟಾದರು. ಪಾರ್ನೆಲ್ ವಿಕೆಟ್ ಪತನದ ಬಳಿಕ ಕೇಶವ್ ಮಹಾರಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಸೌತ್ ಆಫ್ರಿಕಾ ತಂಡದ ಸ್ಕೋರ್ 100 ರನ್ ಗಡಿ ದಾಟಿಸಿದರು. ಕೇಶವ್ ಮಹಾರಾಜ್ 35 ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು. ಕಾಗಿಸೋ ರಬಡಾ ಅಜೇಯ 7 ರನ್ ಸಿಡಿಸಿದರೆ, ಅನ್ರಿಚ್ ನೊರ್ಜೆ ಅಜೇಯ 2 ರನ್ ಸಿಡಿಸಿದರು.