ರಾಜ್ಯದಲ್ಲಿ ಬಂಡವಾಳ ಹೂಡಿ: ಹಿಂದೂಜಾ, ರೋಲ್ಸ್‌ರಾಯ್ಸ್‌ ಮತ್ತಿತರೆ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾದ ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನವೆಂಬರ್‌ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ‌ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು 7 ದಿನಗಳ ಯೂರೋಪ್‌ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು‌ ಮಧ್ಯಮ‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ನೇತೃತ್ವದ ನಿಯೋಗ ಹಲವಾರು ಪ್ರಖ್ಯಾತ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಮಾಡಿ ಚರ್ಚೆ ನಡೆಸಿದೆ.
ವಿಶ್ವದ ಅಗ್ರ 100 ಉದ್ಯಮ ಸಮೂಹಗಳಲ್ಲಿ ಒಂದಾದ ಹಿಂದೂಜಾ ಗ್ರೂಪ್‌ನ ಮುಖ್ಯಸ್ಥರನ್ನು ಲಂಡನ್‌ನಲ್ಲಿ ಶುಕ್ರವಾರ ಭೇಟಿಯಾದ ಸಚಿವ ನಿರಾಣಿ ಚರ್ಚೆ ನಡೆಸಿದರು. ಹಿಂದೂಜಾ ಗ್ರೂಪ್‌ನ ಸಹ ಅಧ್ಯಕ್ಷ ಗೋಪಿಚಂದ್ ಪಿ ಹಿಂದುಜಾ, ಅಶೋಕ್ ಲೇಲ್ಯಾಂಡ್ ಲಿಮಿಟೆಡ್‌ ಅಧ್ಯಕ್ಷ ಧೀರಜ್ ಜಿ. ಹಿಂದುಜಾ, ಹಿಂದುಜಾ ಇನ್ವೆಸ್ಟ್‌ಮೆಂಟ್ಸ್ ಅಂಡ್ ಪ್ರಾಜೆಕ್ಟ್ ಸರ್ವೀಸಸ್ ಲಿಮಿಟೆಡ್‌ನ ಸಿಇಒ ಡಾ. ವಿವೇಕ್ ನಂದ ಅವರು ಎಲೆಕ್ಟ್ರಿಕ್ ಬಸ್‌ಗಳು (ಸ್ವಿಚ್ ಮೊಬಿಲಿಟಿ) ಸೇರಿದಂತೆ ಅನೇಕ ವಲಯಗಳಲ್ಲಿ ಕರ್ನಾಟಕ ಸರ್ಕಾರದ ಜತೆಗಿನ ಸಹಯೋಗದ ಕುರಿತು ಸಚಿವರೊಂದಿಗೆ ಚರ್ಚಿಸಿದರು.
ಆ ಬಳಿಕ ʼರೋಲ್ಸ್ ರಾಯ್ಸ್‌ʼ ಸಂಸ್ಥೆಯ ಸರ್ಕಾರಿ ವ್ಯವಹಾರಗಳ ಮುಖ್ಯಸ್ಥರಾದ ಪ್ಯಾಟ್ರಿಕ್ ಹೊರ್ಗನ್ ಅವರನ್ನು ನಿರಾಣಿ ಲಂಡನ್‌ನಲ್ಲಿ ಭೇಟಿ ಮಾಡಿದರು. ಬೆಂಗಳೂರಿನಲ್ಲಿರುವ ರೋಲ್ಸ್‌ ರಾಯ್ಸ್ ಇಂಜಿನಿಯರಿಂಗ್ ಕೇಂದ್ರದ ವಿಸ್ತರಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಹಯೋಗದ ಕುರಿತು ಈ ವೇಳೆ ಚರ್ಚಿಸಲಾಯಿತು. ಆ ನಂತರ ಯುರೋಪ್‌ನ ಪ್ರಮುಖ ಪೂರೈಕೆ ಸರಪಳಿ ಮತ್ತು ಉಗ್ರಾಣ ಕಂಪನಿಯಾದ ‘ಇಂಕೋರಾ’ದ ನಿರ್ದೇಶಕ ಮಾರ್ಕ್ ನೆಸ್ ಅವರನ್ನು ಲಂಡನ್‌ನಲ್ಲಿ ಭೇಟಿಯಾದರು.
ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ‘ಇಂಕೋರಾ’, ಏರೋಸ್ಪೇಸ್ ಮತ್ತು ಡಿಫೆನ್ಸ್ ಉದ್ಯಮಕ್ಕೆ ಪೂರಕವಾದ ಉಗ್ರಾಣ ಸೌಲಭ್ಯ ಹೊಂದಿದೆ. ಕರ್ನಾಟಕದಲ್ಲಿ ಉದ್ಯಮ‌ ವಿಸ್ತರಣೆ ಕುರಿತು ಮಾರ್ಕ್ ನೆಸ್ ಅವರು ಸಚಿವರೊಂದಿಗೆ ಚರ್ಚಿಸಿದರು. ಯುನೈಟೆಡ್ ಕಿಂಗ್‌ಡಮ್‌ನ ಹೈ ಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಲಂಡನ್‌ನ ಇಂಡಿಯಾಹೌಸ್‌ನಲ್ಲಿ ಶುಕ್ರವಾರ ಭೇಟಿಯಾದ ನಿರಾಣಿ ಯೂರೋಪ್ ಒಕ್ಕೂಟದ ಹೂಡಿಕೆಗಳನ್ನು ಆಕರ್ಷಿಸುವ ಕುರಿತು ಚರ್ಚಿಸಿದರು. ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಅವರನ್ನೊಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!