February 20, 2026
Friday, February 20, 2026
spot_img

ಇಂದಿನಿಂದ ಸಾರಿಗೆ, ಪೊಲೀಸ್ ಇಲಾಖೆಗಳಲ್ಲಿ ಬಾಕಿ ಇರುವ ಉಲ್ಲಂಘನಾ ಕೇಸ್​ಗಳ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಚಾರಿ ಇ-ಚಲನ್​​ನಲ್ಲಿ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ದಂಡ ಪಾವತಿಸಲು ಶೇಕಡಾ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ಆಗಸ್ಟ್ 23ರಿಂದ ಸೆಪ್ಟೆಂಬರ್​ 12ರವರೆಗೆ ಇ-ಚಲನ್​ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ದಂಡಪಾವತಿಗೆ ವಿನಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ, ಟ್ರಾಫಿಕ್ ವೈಯಲೇಷನ್ ಕೇಸ್​​ಗಳಿಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ ಕಲ್ಪಿಸಿದೆ.

ಸಾರಿಗೆ ಇಲಾಖೆಯಲ್ಲಿ ಬಾಕಿಯಿರುವ ಪ್ರಕರಣಗಳಿಗೂ ಇದೇ ಮೊದಲ ಬಾರಿಗೆ ಶೇಕಡಾ 50ರಷ್ಟು ದಂಡ ಪಾವತಿಗೆ ಅನುವು ಮಾಡಿಕೊಡಲಾಗಿದೆ. 1991ರಿಂದ 2019-20ರ ಆರ್ಥಿಕ ಸಾಲಿನವರೆಗೆ ಬಾಕಿ ಇರುವ ಪ್ರಕರಣಗಳಿಗೆ ದಂಡ ಪಾವತಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಬಾಕಿಯಿರುವ ದಂಡ ಪ್ರಕರಣಗಳಿಗೆ ಶೇಕಡಾ 50ರಷ್ಟು ದಂಡ ಪಾವತಿಸಲು ನವೆಂಬರ್​​ 21 (ಇಂದು) ರಿಂದ ಡಿಸೆಂಬರ್​​ 12ರ ವರೆಗೆ ಕಾಲಾವಕಾಶ ನೀಡಲಾಗಿದೆ. 2019ರಿಂದ 2025ರ ಸೆಪ್ಟೆಂಬರ್ ಅಂತ್ಯಕ್ಕೆ 4.44 ಕೋಟಿ ಸಂಚಾರ ಉಲ್ಲಂಘನಾ ಪ್ರಕರಣಗಳಿಂದ 2,695 ಕೋಟಿ ರೂ.ಗಳಿಗಿಂತ ಹೆಚ್ಚು ದಂಡ ಬಾಕಿಯಿದೆ.

ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರ ವರೆಗೆ 4,27,837 ಲಕ್ಷ ದಂಡ ಪ್ರಕರಣಗಳು ಬಾಕಿಯಿದ್ದು, ದಂಡದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ದರದಲ್ಲಿ ಕಟ್ಟಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಈ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಮಾತನಾಡಿ, ”ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರವರೆಗೆ ಬಾಕಿಯಿರುವ ಪ್ರಕರಣಗಳು ಹಾಗೂ ಸಂಚಾರಿ ಇ – ಚಲನ್​ನಲ್ಲಿ ದಾಖಲಾಗಿರುವ ಉಲ್ಲಂಘನಾ ಪ್ರಕರಣಗಳಿಗೆ ಶೇಕಡಾ 50ರಷ್ಟು ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಈವರೆಗೂ 4.44 ಕೋಟಿಗಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿವೆ. ವಾಹನ ಸವಾರರು ಹಾಗೂ ಚಾಲಕರು ನಿಗದಿತ ಅವಧಿಯೊಳಗೆ ಶೇಕಡಾ 50ರಷ್ಟು ದಂಡ ಪಾವತಿಸಿ, ಪ್ರಕರಣಗಳ ವಿಲೇವಾರಿ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !