ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಕೇವಲ ನಗರದ ಜನರಿಗೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗುರುವಾರ ನಡೆದ ‘ವಿಶ್ವ ಅಭಿವೃದ್ಧಿ ವರದಿ 2026’ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, ಕೃತಕ ಬುದ್ಧಿಮತ್ತೆಯ ಸುರಕ್ಷಿತ ಬಳಕೆಯ ಕುರಿತು ಸರ್ಕಾರದ ಮುಂದಿನ ಮಹತ್ವದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.
ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ AI ಬಲ
ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ AI ತಂತ್ರಜ್ಞಾನವನ್ನು ಎಷ್ಟು ಹೆಚ್ಚಾಗಿ ಬಳಸುತ್ತೇವೆಯೋ, ಸಮಾಜಕ್ಕೆ ಅಷ್ಟೇ ಹೆಚ್ಚಿನ ಲಾಭ ಸಿಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಸಾಮಾನ್ಯವಾಗಿ ತಂತ್ರಜ್ಞಾನದಿಂದ ವಂಚಿತವಾಗುತ್ತಿದ್ದ ಸಮಾಜದ ಹಿಂದುಳಿದ ವರ್ಗಗಳಿಗೆ AI ನಿಂದ ಹೇಗೆ ಲಾಭವಾಗುತ್ತದೆ ಎಂಬುದರ ಕುರಿತು ವಿಶ್ವಬ್ಯಾಂಕ್ ಜೊತೆಗೂಡಿ ಸಮಗ್ರ ಅಧ್ಯಯನ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ತಿಂಗಳು ‘AI ಸುರಕ್ಷತಾ ಪೇಪರ್’ ಬಿಡುಗಡೆ
ಕೃತಕ ಬುದ್ಧಿಮತ್ತೆಯ ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ತಿಂಗಳು AI ಸುರಕ್ಷತೆ, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆಯ ಲಾಭ-ನಷ್ಟಗಳು ಹಾಗೂ ಡೀಪ್ಫೇಕ್ನಂತಹ ಅಪಾಯಕಾರಿ ಕೃತ್ಯಗಳಿಂದ ಜನರನ್ನು ರಕ್ಷಿಸುವ ಕುರಿತು ಸಾರ್ವಜನಿಕ ಸಮಾಲೋಚನಾ ಪತ್ರವನ್ನು ಹೊರಡಿಸಲಾಗುವುದು. ಇದರ ಆಧಾರದ ಮೇಲೆಯೇ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ AI ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.
ಕಾಲೇಜು ಪಠ್ಯಕ್ರಮದಲ್ಲಿ AI ಸೇರ್ಪಡೆ
ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಅನುಕೂಲವಾಗುವಂತೆ ಕಾಲೇಜು ಹಂತದಲ್ಲೇ AI ಆಧಾರಿತ ಪಠ್ಯಕ್ರಮವನ್ನು ತರಲು ಉದ್ಯಮ ವಲಯದಿಂದ ಬಂದಿರುವ ಸಲಹೆಗಳನ್ನು ಶಿಕ್ಷಣ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಸಚಿವಾಲಯ, ಉದ್ಯಮ ವಲಯ ಮತ್ತು ವಿಶ್ವವಿದ್ಯಾಲಯಗಳು ಒಟ್ಟಾಗಿ ಇಂದಿನ ಅಗತ್ಯಕ್ಕೆ ತಕ್ಕಂತೆ ಕೋರ್ಸ್ಗಳನ್ನು ನವೀಕರಿಸಲಿದ್ದು, ಇದರಿಂದ ಇಂದಿನ ವಿದ್ಯಾರ್ಥಿಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:
ವಿದೇಶಿ AI ಮಾಡೆಲ್ಗಳಿಂದ ಡೇಟಾ ಸೋರಿಕೆ ಆತಂಕ
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ವಿದೇಶಿ ಕಂಪನಿಗಳ ಮಾಲೀಕತ್ವದ AI ಮಾಡೆಲ್ಗಳನ್ನು ಬಳಸುವುದರ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ವಿದೇಶಿ AI ಮಾಡೆಲ್ಗಳನ್ನು ಬಳಸುವುದರಿಂದ ಭಾರತದ ಪ್ರಮುಖ ಡೇಟಾ ದೇಶದಿಂದ ಹೊರಗೆ ಹೋಗುವ ಮತ್ತು ಆ ವ್ಯವಸ್ಥೆಗಳು ನಮ್ಮದೇ ಡೇಟಾ ಮೂಲಕ ತರಬೇತಿ ಪಡೆದು ಬಲಗೊಳ್ಳುವ ಅಪಾಯವಿದೆ. ಹೀಗಾಗಿ ಭಾರತವು ತನ್ನದೇ ಆದ ಸ್ವಂತ ದೇಶಿ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದರು.



