ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ಬಿಲಿಯನೇರ್ ಹಾಗೂ ವಿಶ್ವದ ಅಗ್ರಗಣ್ಯ ಸಿರಿವಂತರಲ್ಲಿ ಒಬ್ಬರಾದ ಗೌತಮ್ ಅದಾನಿ ಗ್ರೂಪ್ ಸಾಲದ ಹೊರೆ ಹೊತ್ತಿರುವ ʼಸಿಮೆಂಟ್ ಘಟಕʼದ ಖರೀದಿಗೆ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಪ್ರಕಾಶ್ ಪವರ್ ವೆಂಚರ್ಸ್ ಮಾಲೀಕತ್ವದಲ್ಲಿರುವ ಸಿಮೆಂಟ್ ಗ್ರೈಂಡಿಂಗ್ ಯೂನಿಟ್ ಮತ್ತು ಇತರೆ ಸಣ್ಣ ಸ್ವತ್ತುಗಳ ಖರೀದಿಗೆ ಅದಾನಿ ಗ್ರೂಪ್ ಸುಮಾರು 50 ಶತಕೋಟಿ ರೂಪಾಯಿ (ಅಂದಾಜು $606 ಮಿಲಿಯನ್) ಪಾವತಿಗೆ ಸಿದ್ಧವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ಮಾಹಿತಿ ನೀಡಿವೆ.
ಹಾಗಿದ್ದರೂ ಈ ಸುದ್ದಿಯನ್ನು ಅದಾನಿ ಗ್ರೂಪ್ ಈ ವರೆಗೆ ಖಚಿತಪಡಿಸಿಲ್ಲ. ಈ ಒಪ್ಪಂದವು ಸಿಮೆಂಟ್ ಉತ್ಪಾದನೆ ವಲಯದಲ್ಲಿ ಅದಾನಿ ಗ್ರೂಪ್‌ಗೆ ಪ್ರಾಬಲ್ಯವನ್ನು ಕ್ರೋಢೀಕರಿಸಲು ನಿರ್ಣಾಯಕ ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಮೇ ತಿಂಗಳಲ್ಲಿ ಅದಾನಿ ಗ್ರೂಪ್ ಸ್ವಿಟ್ಜರ್ಲೆಂಡ್‌ನ ಹೋಲ್ಸಿಮ್ ಲಿಮಿಟೆಡ್‌ನಿಂದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್ ಅನ್ನು ಖರೀದಿಸಿದ ನಂತರ ಸಿಮೆಂಟ್ ಉದ್ಯಮದಲ್ಲಿ ಅದಾನಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ.
ಈ ಕಂಪನಿಗಳ ಸ್ವಾಧೀನದೊಂದಿಗೆ ಅದಾನಿ ಗ್ರೂಪ್ ಇದೀಗ ವಾರ್ಷಿಕವಾಗಿ 67.5 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯದ ಸಂಸ್ಥೆಯಾಗಿ ಬೆಳೆದಿದ್ದು, ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರಾಗಿ ಹೊರಹೊಮ್ಮಿದ್ದಾರೆ. ಜೈಪ್ರಕಾಶ್ ಪವರ್ ವೆಂಚರ್ಸ್ ಜೊತೆಗಿನ ಮಾತುಕತೆ ಫಲಪ್ರದವಾದರೆ ಸಿಮೆಂಟ್ ಉತ್ಪಾದನಾ ಕ್ಷೇತ್ರದಲ್ಲಿ ಅದಾನಿ ಸಾಮರ್ಥ್ಯ ಮನ್ನಷ್ಟು ಹೆಚ್ಚಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ