ಹೊಸದಿಗಂತ ಡಿಜಿಟಲ್ ಡೆಸ್ಕ್
ಭರವಸೆಯ ಯುವ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್ ಅವರಿಗೆ ಈ ವರ್ಷ ಅಷ್ಟೇನು ಉತ್ತಮವಾಗಿಲ್ಲ. ಐಪಿಎಲ್ ನಲ್ಲಿ ಸಿಎಸ್ ಕೆ ಪರ ಸಾಧಾರಣ ಎನ್ನುವಂತಹ ಪ್ರದರ್ಶನ ತೋರಿದ್ದ ಋತುರಾಜ್ ಆ ಬಳಿಕ ಟೀಂ ಇಂಡಿಯಾದಲ್ಲಿ ಹಲವಾರು ಅವಕಾಶ ಪಡೆದರೂ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದರು. ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಋತುರಾಜ್ 42 ಎಸೆತಗಳನ್ನು ಎದುರಿಸಿದ್ದರೂ ಕೇವಲ 19 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಆದ್ದರಿಂದ ಮುಂದಿನ ಪಂದ್ಯಗಳಿಗೆ ತಂಡದಿಂದ ಅವರನ್ನು ಕೈಬಿಡಲಾಗಿತ್ತು. ಇದೀಗ ದೇಶಿ ಕ್ರಿಕೆಟ್ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತವರು ತಂಡ ಮಹರಾಷ್ಟ್ರ ಪರ ಕಣಕ್ಕಿಳಿದಿರುವ ಋತುರಾಜ್ ಭರ್ಜರಿ ಶತಕ ಸಿಡಿಸಿ ಆಯ್ಕೆಗಾರರಿಗೆ ತಾನಿನ್ನು ಫಾರ್ಮ್ ನಲ್ಲೇ ಇದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
ರುತುರಾಜ್ ಗಾಯಕ್ವಾಡ್ 65 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ಗಳಿದ್ದ 112 ರನ್ ಸಿಡಿಸಿದರು. ಗಾಯಕ್ವಾಡ್ ಅವರ ಆರಂಭಿಕ ಜೊತೆಗಾರ ಯಶ್ ನಹರ್ ಕೇವಲ ನಾಲ್ಕು ರನ್ಗಳೊಂದಿಗೆ ನಿರ್ಗಮಿಸಿದ ಕಾರಣ ಮಹಾರಾಷ್ಟ್ರ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆ ಬಳಿಕ ರಾಹುಲ್ ತ್ರಿಪಾಠಿ ಅವರೊಂದಿಗೆ ಎರಡನೇ ವಿಕೆಟ್ಗೆ ಗಾಯಕ್ವಾಡ್ 49 ರನ್ಗಳ ಪಾಲುದಾರಿಕೆಯನ್ನು ಸೇರಿಸಿದರು. 15 ಓವರ್ಗಳ ಅಂತ್ಯದಲ್ಲಿ ರುತುರಾಜ್ ಗಾಯಕ್ವಾಡ್ 48 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಈ ಹಂತದಲ್ಲಿ ಗೇರ್ ಬದಲಾಯಿಸಿದ ಅವರು, ಆ ಬಳಿಕ ಕೇವಲ 17 ಎಸೆತಗಳಲ್ಲಿ 46 ರನ್ ಸಿಡಿಸಿ ಭರ್ಜರಿ ಶತಕದ ಸಂಭ್ರಮವನ್ನು ಆಚರಿಸಿದರು. ಐಪಿಎಲ್ 2021 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ 60 ಎಸೆತಗಳಲ್ಲಿ 101 ರನ್ ಗಳಿಸಿದ ನಂತರ, ರುತುರಾಜ್ ಗಾಯಕ್ವಾಡ್ ಅವರ ವೃತ್ತಿಜೀವನಕ್ಕೆ ಈ 100 ಸಾಕಷ್ಟು ಮಹತ್ವದ್ದಾಗಿದೆ. ವಾಸ್ತವವಾಗಿ, ಈ 112- ರನ್ ಇನ್ನಿಂಗ್ಸ್ ಇದುವರೆಗಿನ ಅವರ ಗರಿಷ್ಠ T20 ಸ್ಕೋರ್ ಆಗಿದೆ.
ಅ. 11 ರಂದು ಮಹಾರಾಷ್ಟ್ರ ವಿರುದ್ಧವೇ ದೇವದತ್ ಪಡಿಕ್ಕಲ್ 124* ರನ್ ಗಳಿಸಿದ ನಂತರ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಈ ವರ್ಷ ದಾಖಲಾದ ಎರಡನೇ ಶತಕವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ