ರಾಜ್ಯದಲ್ಲಿ ಹೆಚ್ಚುತ್ತಿದೆ ಚರ್ಮಗಂಟು ರೋಗ: ಜಾನುವಾರು ಜಾತ್ರೆ, ಸಂತೆ ನಿಷೇಧಿಸಲು ಸಚಿವ ಪ್ರಭು ಚವ್ಹಾಣ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಗೋವುಗಳ ಮೇಲೆ ಹೆಚ್ಚುತ್ತಿರುವ ಚರ್ಮಗಂಟು ರೋಗ ತಡೆಗಟ್ಟಲು ಜಾನುವಾರು ಜಾತ್ರೆ, ಜಾನುವಾರು ಸಂತೆ ‌ಮತ್ತು ಸಾಗಾಣಿಕೆಯನ್ನು ನಿಷೇಧಿಸಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಇನ್ನು ಚರ್ಮಗಂಟು ರೋಗದ ಕುರಿತು ಮುಂಜಾಗ್ರತಾ ಕ್ರಮವಾಗಿ ಕರಪತ್ರಗಳು, ಪೋಸ್ಟರ್, ಬ್ಯಾನರ್ ಹಾಗೂ ಸ್ಥಳೀಯವಾಗಿ ಪಶು ವೈದ್ಯರು, ಪಶುಸಂಗೋಪನೆ ಇಲಾಖಾ ಅಧಿಕಾರಿಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಹಾಗೂ ಜಾನುವಾರು ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ‌ಹೇಳಿದರು.

ಚರ್ಮಗಂಟು ರೋಗ ತಗುಲಿದ ಪ್ರಾಣಿಯಿಂದ ರಕ್ತ ಹೀರುವ ಸೊಳ್ಳೆ, ಉಣ್ಣೆ, ಕಚ್ಚುವ ನೊಣಗಳು, ವೈರಾಣುಗಳಿಂದ ಜಾನುವಾರುಗಳಿಗೆ ಹರಡುತ್ತದೆ. ರೋಗ ಕಾಣಿಸಿಕೊಂಡ ಪ್ರದೇಶ ಹಾಗೂ ಸುತ್ತಮುತ್ತಲಿನ 5 ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯವಂತ ರಾಸುಗಳನ್ನು ಬೇರ್ಪಡಿಸಿ, ಸ್ಥಳೀಯ ಪಶು ವೈದ್ಯರು ಸಂಪರ್ಕಿಸಿ ಎಂದರು.

ಚರ್ಮಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ವೈರಾಣು ಮುಖ್ಯ ಕಾರಣ. ಜಾನುವಾರು ರೋಗದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಜತೆಗೆ ಔಷಧ-ಆರೈಕೆ ಸಿಗಬೇಕು. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅತಿಯಾದ ಜ್ವರ, ಆಹಾರ ನಿರಾಕರಣೆ, ಹಾಲಿನ ಇಳುವರಿ ಕಡಿಮೆಯಾಗುವುದು, ಮೈಮೇಲೆ 2-5 ಸೆ.ಮೀ ಗಾತ್ರದ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಗಂಟುಗಳು ಸಿಪ್ಪೆ ಸುಲಿದಂತೆ ಒಡೆದು ವ್ರಣವಾಗುವ ರೋಗ ಲಕ್ಷಣಗಳು ಜಾನುವಾರುಗಳಲ್ಲಿ ಕಂಡುಬಂದರೆ ಕೂಡಲೇ ಸಮೀಪದ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಪ್ರಭು ಚವ್ಹಾಣ್ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!