ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೊಂದು ಸುಂದರ ಪ್ರೇಮಕಥೆ, ಮಲೆನಾಡಿನಲ್ಲಿ ಚಿಗುರೊಡೆಯುವ ಪ್ರೀತಿಯ ಚಿಟ್ಟೆ ಹಾರುವ ಸಮಯ ಎಷ್ಟೋ ದೂರದಲ್ಲಿಲ್ಲ. ಮುಂದಿನ ತಿಂಗಳ 4ನೇ ತಾರೀಖಿನಂದು ʻಕಂಬ್ಳಿಹುಳʼ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಅಪ್ಪಟ ಮಲೆನಾಡಿನಲ್ಲಿ ಸಿದ್ಧವಾದ ಈ ಸಿನಿಮಾ ಈಗಾಗಲೇ ಸೆಲೆಬ್ರೆಟಿಗಳು ಸೇರಿದಂತೆ ಜನರಿಂದಲೂ ಕೂಡಾ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.
ಅದರಲ್ಲೂ ಈ ಸಿನಿಮಾದ ಹಾಡುಗಳಿಗೆ ಮಾರುಹೋಗದವರಿಲ್ಲ. ಈಗಾಗಲೇ ಸುಪ್ರಸಿದ್ದ ಗಾಯಕ ವಿಜಯ್ ಪ್ರಕಾಶ್ ಅವರ ಸುಮಧುರ ಕಂಠದಿಂದ ಮೂಡಿಬಂದ ʻಜಾರಿ ಬಿದ್ದರೂ ಯಾಕೀ ನಗುʼ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಎರಡು ಮುದ್ದಾದ ಮನಸುಗಳ ನವಿರಾದ ಪ್ರೇಮಕಥೆಯನ್ನು ಈ ಹಾಡಿನಲ್ಲಿ ವರ್ಣಿಸಲಾಗಿದೆ. ಎಂಥವರನ್ನೂ ಮಂತ್ರಮುಗ್ದರನ್ನಾಗಿಸುವಂತಹ ಹಾಡುಗಳು ಈ ಸಿನಿಮಾದಲ್ಲಿವೆ. ಅಮ್ಮನ ಪ್ರೀತಿಗೆ ಹೆಸರುವಾಸಿಯಾಗಿ ಮನಮಿಡಿಯುವ ಲಾಲಿ…ಲಾಲಿ..ಹಾಡು ಕೂಡ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ.
ಈ ಸಿನಿಮಾದಲ್ಲಿ ಮಲಯಾಳಿ ಕುಟ್ಟಿಯಾಗಿ ಅಶ್ವಿತಾ ಆರ್ ಹೆಗಡೆ ಕಾಣಿಸಿಕೊಂಡಿದ್ದು, ನಾಯಕನಾಗಿ ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೋಡಿ ಕುದುರೆ, ಗೋಣಿ ಚೀಲ ಕಿರುಚಿತ್ರಗಳ ಹೆಸರುವಾಸಿಯಾದ ನಿರ್ದೇಶಕ ನವನ್ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ.