ಹೊಸದಿಗಂತ ವರದಿ,ಕೆ.ಆರ್.ಪೇಟೆ:
ಮಳವಳ್ಳಿಯಲ್ಲಿ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರು.ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭಮೇಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಎಲ್ಲಾ ಸೆಕ್ಷನ್ಗಳನ್ನು ಹಾಕಿದ್ದಾರೆ. ಪ್ರಕರಣ ಸಂಬಂಧ ಕೂಡಲೇ ತನಿಖೆಯಾಗಿ ತಪ್ಪಿತಸ್ಥನಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಪೊಲೀಸರಿಗೆ ಸೂಚಿಸಿದರು.
ಎ್ಎಸ್ಎಲ್ ವರದಿಯನ್ನು ವಾರದೊಳಗೆ ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ. ವರದಿ ಬಂದ ಕೂಡಲೇ ದೋಷಾರೋಪಣಾ ಪಟ್ಟಿಯನ್ನು ಪೋಸ್ಕೋ ನ್ಯಾಯಾಲಯಕ್ಕೆ ರವಾನಿಸಿ ಆದಷ್ಟು ಬೇಗ ಈ ಪ್ರಕರಣಕ್ಕೆ ನ್ಯಾಯ ದೊರಕಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಪ್ರಕರಣ ಇಂತಹ ಕೃತ್ಯ ನಡೆಸುವವರಿಗೆ ಉದಾಹರಣೆಯಾಗಬೇಕಿದೆ. ಇನ್ನೊಮ್ಮೆ ಈ ರೀತಿಯ ಅತ್ಯಾಚಾರ ನಡೆದರೆ ಅತಿ ಕಡಿಮೆ ಅವಧಿಯಲ್ಲಿ ಉಗ್ರ ಶಿಕ್ಷೆ ನೀಡುತ್ತದೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವಂತೆ ತಿಳಿಸಿದರು.
ಮನುಷ್ಯತ್ವವಿಲ್ಲದವ ಮಾತ್ರ ಇಂತಹ ಕೃತ್ಯ ಮಾಡಲು ಸಾಧ್ಯ. ಏನೂ ತಿಳಿಯದ ಆ ಕಂದಮ್ಮನ ಮೇಲಿನ ಅತ್ಯಾಚಾರ, ಹತ್ಯೆ ನೆನೆದರೆ ಕರುಳು ಕಿತ್ತು ಬರುತ್ತದೆ. ವೌಲ್ಯಗಳ ಕುಸಿತದಿಂದ ಹೀಗೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂಬ ಸ್ಪಷ್ಟತೆಯಿಲ್ಲ. ಭಯಭಕ್ತಿ ಇರಬೇಕಾದ ಸಂಸ್ಕಾರವಿರಬೇಕು. ನೈತಿಕವಾಗಿ ಇರುವಂತಹ ಬದ್ಧತೆ, ತಪ್ಪು ಮಾಡಿದರೂ ಭಯ ಇರಲು ಸಂಸ್ಕಾರ ಬೇಕು. ನಾಗರೀಕತೆ ಮತ್ತು ಸಂಸ್ಕೃತಿ ನಡುವೆ ವ್ಯತ್ಯಾಸವಿದೆ. ನಮ್ಮ ಹತ್ತಿರ ಇರುವುದು ನಾಗರೀಕತೆ, ನಾವು ಏನು ಆಗಿದ್ಧೇವೋ ಅದು ಸಂಸ್ಕೃತಿ ಎಂದು ಹೇಳಿದರು.