Tuesday, November 25, 2025

ಬಿಗ್‌ಬಾಸ್ ಮನೆಯಲ್ಲಿ ‘Women card’ ವಿವಾದ: ಅಶ್ವಿನಿಗೆ ಸುದೀಪ್‌ ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯ ಇತ್ತೀಚಿನ ಎಪಿಸೋಡ್‌ನಲ್ಲಿ ಸ್ಪರ್ಧಿ ಅಶ್ವಿನಿ ಅವರ ವರ್ತನೆ ಹೊಸ ಚರ್ಚೆಗೆ ಕಾರಣವಾಗಿದೆ. ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿಯಾಗಿ ಪರಿಚಿತರಾದ ಅಶ್ವಿನಿ, ಮನೆಯೊಳಗೆ ಸಹ ಆಗಾಗ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿದ್ದರೂ, ಅದೇ ನಡೆ ಇದೀಗ ಅವರಿಗೆ ಮುಳ್ಳಾಗಿದೆ. ಅನೇಕ ಸಂದರ್ಭಗಳಲ್ಲಿ ಬೇರೆಯವರ ಪರವಾಗಿ ಮಾತನಾಡುವ ಅಶ್ವಿನಿ ಗೌರವದ ಹೆಸರಿನಲ್ಲಿ ವಾದ–ವಿವಾದಕ್ಕೆ ಕೈ ಹಾಕುತ್ತಿದ್ದಾರೆಯೆಂಬ ಆರೋಪ ಎದ್ದಿದೆ.

ಈ ಹಿನ್ನೆಲೆ ಇಂದು ನಟ ಸುದೀಪ್ ತಮ್ಮ ವೀಕೆಂಡ್ ಕ್ಲಾಸ್‌ನಲ್ಲಿ ಅಶ್ವಿನಿಗೆ ನೇರ ಪ್ರಶ್ನೆಗಳನ್ನು ಮಾಡಿದ್ದಾರೆ. ಮಹಿಳೆಯರ ಗೌರವ ಕಾಪಾಡುವ ಜವಾಬ್ದಾರಿ ನಿಮಗೆ ಯಾರು ಕೊಟ್ಟಿದ್ದಾರೆ? ಬಿಗ್‌ಬಾಸ್ ಮನೆಯಲ್ಲಿ ಉಳಿದ ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಶಕ್ತಿ ಇಲ್ಲವೆ? ಅಥವಾ ಅವರು ನಿಮಗೆ ಕೇಳಿಕೊಂಡಿದ್ದಾರೆಯೇ ಅವರ ಪರವಾಗಿ ಮಾತನಾಡಲು? ಎಂದು ತೀವ್ರವಾಗಿ ಪ್ರಶ್ನಿಸಿದ ಸುದೀಪ್, ಇದೇ ಪ್ರಶ್ನೆಯನ್ನು ಇತರೆ ಮಹಿಳಾ ಸ್ಪರ್ಧಿಗಳ ಎದುರು ಹಾಕಿದರು.

ಸುದೀಪ್ ಸ್ಪಷ್ಟಪಡಿಸಿದಂತೆ, ಮನೆಯೊಳಗೆ ಮಹಿಳೆಯರಿಗೆ ಯಾವ ಸಂದರ್ಭದಲ್ಲೂ ಗೌರವ ಕೊರತೆಯಾಗಿಲ್ಲ ಮತ್ತು ಯಾವುದೇ ತಪ್ಪು ನಡೆದರೂ ಉತ್ಪಾದನಾ ತಂಡ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಮಹಿಳೆಯರ ಮೇಲೆ ಆಪಾದನಾತ್ಮಕ ಮಾತು ಅಥವಾ ವರ್ತನೆ ಕಂಡುಬಂದರೆ, ಮೊದಲಿಗೆ ಅದು ಆ ಮಹಿಳೆಗೆ ಗೊತ್ತಾಗುತ್ತದೆ. ಅಂತಹ ಸಂದರ್ಭದಲ್ಲಿ ತಕ್ಷಣ ಹೇಳಿದರೆ ಅದಕ್ಕೆ ಕ್ಷಣಮಾತ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದರು.

ಮಹಿಳಾ ಕಾರ್ಡ್ ಬಳಸಿ ಅನಗತ್ಯವಾಗಿ ವಾದಗಳಿಗೆ ತುಪ್ಪ ಸುರಿಯುವುದು ಮನೆಯೊಳಗಿನ ಗಂಡು ಸ್ಪರ್ಧಿಗಳ ಬಗ್ಗೆ ತಪ್ಪು ಭಾವನೆ ಮೂಡಿಸಬಹುದು ಎಂದು ಸುದೀಪ್ ಎಚ್ಚರಿಸಿದರು. “ಈ ಮನೆಯಲ್ಲಿ ಯಾರೂ ವುಮೆನ್ ಕಾರ್ಡ್ ಆಡುವುದಿಲ್ಲ. ನಿಮ್ಮ ಗೌರವವನ್ನು ನೀವೇ ಕಾಪಾಡಿಕೊಳ್ಳಬೇಕು, ಅದನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಬೇರೆ ಸ್ಪರ್ಧಿಗಳಿಗೆ ನೀಡಬೇಡಿ. ಯಾಕೆ ನೀವು ಅಷ್ಟು ದುರ್ಬಲರಾಗಿರಬೇಕು?” ಎಂದು ಅವರು ಕೇಳಿದ ಮಾತುಗಳು ಮನೆಯಲ್ಲೇ ಗಂಭೀರ ಚರ್ಚೆಗೆ ಕಾರಣವಾಯಿತು.

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಅವರ ನಡೆ ಮುಂದೇನು ತಿರುವು ಪಡೆಯಲಿದೆ ಎನ್ನುವುದು ಈಗ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!