ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ನಂದಿನಿ ತುಪ್ಪಕ್ಕೆ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಇದ್ದು, ಇದರ ಜೊತೆ ಜೊತೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾವೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಲತಃ ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಇದರ ಏಜೆನ್ಸಿ ಪಡೆದಿದ್ದಾರೆ. ಕೆಎಂಎಫ್ ಹಾಗೂ ಕುಮಾರ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಮಾಹಿತಿ ನೀಡಿ, ‘ನಂದಿನಿ ತುಪ್ಪಕ್ಕೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ರಫ್ತು ಆಗಲಿದೆ. ಮೈಸೂರು ಮೂಲದ ಕುಮಾರ್ ಅವರು ಅಮೆರಿಕಾದಲ್ಲಿ ಏಜೆನ್ಸಿ ಪಡೆದಿದ್ದು, ಈಸ್ಟ್ ಅಂಡ್ ಎಂಟರ್ ಪ್ರೈಸಸ್ ಸಂಸ್ಥೆಯ ಮೂಲಕ ರಫ್ತು ಆದೇಶ ಬಂದಿದೆ. ಮೊದಲ ಹಂತದಲ್ಲಿ 13 ಮೆಟ್ರಿಕ್ ಟನ್ ತುಪ್ಪ ರಫ್ತು ಮಾಡಲಾಗುತ್ತಿದೆ’ಮ್ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾಕ್ಕೆ ಕೊಚ್ಚಿನ್ ಬಂದರಿನ ಮೂಲಕ ಹಡಗು ಮಾರ್ಗದಲ್ಲಿ, ಆಸ್ಟ್ರೇಲಿಯಾ ಮತ್ತು ಅಮೆರಿಕಾಕ್ಕೆ ಚೆನ್ನೈ ಬಂದರಿನ ಮೂಲಕ ತುಪ್ಪ ಸಾಗಲಿದೆ. ನಂದಿನಿ ತನ್ನ ಮಾರುಕಟ್ಟೆಯನ್ನು ವಿಶ್ವದಾದ್ಯಂತ ವಿಸ್ತರಿಸಿಕೊಳ್ಳುತ್ತಿದೆ. ಇದು ಕರ್ನಾಟಕದ ರೈತರಿಗೆ ದೊಡ್ಡ ಗೌರವ ಎಂದು ಶಿವಸ್ವಾಮಿ ಹೇಳಿದ್ದಾರೆ.
ಹಾಲಿನ ದರ ಏರಿಕೆ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹಾಲಿನ ದರ ಏರಿಕೆ ಬಗ್ಗೆ ಕೆಲವರಲ್ಲಿ ಆತಂಕ ಮೂಡಿತ್ತು. ಆದರೆ ಕೆಎಂಎಫ್ ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದೆ. “ಸದ್ಯ ನಂದಿನಿ ಹಾಲಿನ ದರ ಏರಿಕೆಯ ಯಾವುದೇ ಪ್ರಸ್ತಾವನೆ ಇಲ್ಲ. ಕಳೆದ ಏಪ್ರಿಲ್ 1ರಿಂದಲೇ ರೈತರಿಗೆ ಲೀಟರ್‌ಗೆ 4 ರೂ. ಹೆಚ್ಚುವರಿ ನೀಡುತ್ತಿದ್ದೇವೆ. ರಾಜ್ಯದ 16 ಹಾಲು ಒಕ್ಕೂಟಗಳು ನೇರವಾಗಿ ಈ ಹಣ ರೈತರಿಗೆ ತಲುಪಿಸುತ್ತಿವೆ. ಪ್ರತಿದಿನ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹಿಸುತ್ತಿದ್ದು, ಗ್ರಾಹಕರ ಮೇಲೆ ಹೊರೆ ಹಾಕುವ ಉದ್ದೇಶವಿಲ್ಲ” ಎಂದು ಶಿವಸ್ವಾಮಿ ಭರವಸೆ ನೀಡಿದ್ದಾರೆ.

