ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022ರ ಇಂದಿನ ಪಂದ್ಯವು ಭಾರತ ಮತ್ತು ಪಾಕ್ ನಡುವೆ ನಡೆಯಲಿದ್ದು ಎಂಸಿಜಿ ಕ್ರೀಡಾಂಗಣವು ರಂಗೇರಿದೆ.
ಈಗಾಗಲೇ ಟಾಸ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಟಾಸ್ ನಲ್ಲಿ ಭಾರತವು ಜಯಗಳಿಸಿದ್ದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬದ್ಧ ವೈರಿಗಳೆಂದೇ ಕರೆಸಿಕೊಳ್ಳುವ ಭಾರತ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿಯನ್ನು ವೀಕ್ಷಿಸಲು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಿದ್ದು 90 ಸಾವಿರಕ್ಕೂ ಅಧಿಕ ಅಭಿಮಾನಿಗಳು ಮೆಲ್ಬೋರ್ನ್ ಎಂಸಿಜಿ ಮೈದಾನದಲ್ಲಿ ಜಮಾಯಿಸಿದ್ದು ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಎಂಸಿಜಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಗೆ ಹೆಚ್ಚು ಸೂಕ್ತವಾಗಿದ್ದರೂ ಇಲ್ಲಿ ವೇಗಿಗಳು ನಿರ್ಣಾಯಕ ಪಾತ್ರ ವಹಿಸುವ ಸಂಭವ ಹೆಚ್ಚಿದೆ.ಕಳೆದ 3 ಟಿ20 ಪಂದ್ಯಗಳಲ್ಲಿ ವೇಗಿಗಳು 28 ವಿಕೆಟ್ ಗಳಲ್ಲಿ 23ರನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ 3 ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡ ಜಯ ಗಳಿಸಿದ್ದು ಮೊದಲ ಇನ್ನಿಂಗ್ಸ್ ನ ಸರಾಸರಿ ಮೊತ್ತ 145 ರನ್ ಗಳಾಗಿದೆ.
ಪಾಕಿಸ್ತಾನ ತಂಡದಿಂದ ರಿಜ್ವಾನ್ ಹಾಗೂ ಬಾಬರ್ ಆಜಂ ಓಪ್ನರ್ ಗಳಾಗಿ ಕಣಕ್ಕಿಳಿದಿದ್ದರೆ ಭಾರತದ ಭುವನೇಶ್ವರ್ ಕುಮಾರ್ ಮೊದಲ ಓವರ್ ನ ದಾಳಿ ನಡೆಸಿದ್ದಾರೆ.