ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2022ರ ಭಾಗವಾಗಿ ಇಂದು ಮೇಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 20 ಓವರ್ ಪೂರ್ಣಗೊಳಿಸಿ 8 ವಿಕೆಟ್ ಕಳೆದುಕೊಂಡು 159 ರನ್ ಗಳನ್ನು ಕಲೆ ಹಾಕಿದ್ದು ಭಾರತಕ್ಕೆ 160 ರನ್ ಗಳ ಟಾರ್ಗೆಟ್ ನೀಡಿದೆ.
ಆರಂಭಿಕವಾಗಿ ಎರಡನೇ ಓವರ್ ನಲ್ಲಿಯೇ ಪಾಕಿಸ್ತಾನದ ಆರಂಭಿಕ ಸ್ಟಾರ್ ಆಟಗಾರ ಬಾಬರ್ ಆಜಂ ಹಾಗೂ ನಂತರದಲ್ಲಿ ರಿಜ್ವಾನ್ ಸೇರಿದಂತೆ ಪ್ರಬಲರ ವಿಕೆಟ್ ಗಳನ್ನು ಕಳೆದುಕೊಂಡರೆ ಮೊದಲ ಹತ್ತು ಓವರ್ ಗಳಲ್ಲಿ ಭಾರತದ ಬೌಲರ್ ಗಳು ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಂತರದಲ್ಲಿ ಶಾನ್ ಮಸೂದ್ ಅವರ ಅರ್ಧಶತಕದ ಸ್ಥಿರ ಆಟವು ಪಾಕಿಸ್ತಾನದ ರನ್ ಗಳಿಗೆ ಕೊಡುಗೆ ನೀಡಿತು.
ಇಫ್ತಿಕಾರ್ ಅಹಮ್ಮದ್, ಶಾನ್ ಮಸೂದ್ ಸ್ಪೋಟಕ ಅರ್ಧಶತಕದ ಹೊರತಾಗಿಯೂ, ಆರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿ ಪಾಕಿಸ್ತಾನ ತಂಡವು 8 ವಿಕೆಟ್ ಕಳೆದುಕೊಂಡಿತು. ಚೊಚ್ಚಲ ಟಿ20 ವಿಶ್ವಕಪ್ ಪಂದ್ಯವನ್ನಾಡುತ್ತಿರುವ ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಮಾರಕ ದಾಳಿ ನಡೆಸಿದರು.
ಭಾರತಕ್ಕೆ ಆರಂಭದಲ್ಲೇ ಶಾಕ್:
160 ರನ್ ಗಳ ಗುರಿ ಬೆನ್ನಟ್ಟಿ ಕಣಕ್ಕಿಳಿದ ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ಕೆ ಎಲ್ ರಾಹುಲ್ ಅವರ ಜೋಡಿಗೆ ಆರಂಭದಲ್ಲೇ ಆಘಾತ ಉಂಟಾಗಿದ್ದು ಕೆ ಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ. ಒನ್ ಡೌನ್ ನಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದು ಭಾರತವು 3 ಓವರ್ ಗಳಲ್ಲಿ 10 ರನ್ ಕಲೆ ಹಾಕಿ 1 ವಿಕೆಟ್ ಕಳೆದುಕೊಂಡಿದೆ.