ಹೊಸದಿಗಂತ ವರದಿ, ಗದಗ:
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಚಲನಚಿತ್ರವು ಶುಕ್ರವಾರ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ನಗರದ ವೆಂಕಟೇಶ ಚಿತ್ರಮಂದಿರ ಬಳಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಗಂಧದಗುಡಿ ಚಲನಚಿತ್ರದ ಫಸ್ಟ್ ಶೋ ವೀಕ್ಷಿಸಲು ಅಭಿಮಾನಿಗಳ ಮಹಾಪೂರವೇ ಹರಿದುಬಂದಿತ್ತು.
ನಗರದ ವೆಂಕಟೇಶ ಚಿತ್ರಮಂದಿರದ ಬಳಿ ತಮ್ಮ ನೆಚ್ಚಿನ ನಾಯಕ ದಿ. ಪುನೀತ್ ರಾಜ್‌ಕುಮಾರ್ ಅವರ ಚಿತ್ರಕ್ಕೆ ಶುಭಕೋರಲು ದೊಡ್ಡ ಫ್ಲೆಕ್ಸ್ ಬ್ಯಾನರ್ ಕಟೌಟ್ ಗಳನ್ನು ಹಾಕಿದ್ದರು. ಕೆಲವು ಅಪ್ಪು ಅಭಿಮಾನಿಗಳು ತಮ್ಮ ಎದೆಯ ಮೇಲೆ ಪುನೀತ್ ರಾಜ್‌ಕುಮಾರ ಅವರ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನವನ್ನು ಮೆರೆದರು. ಇನ್ನೋರ್ವ ಅಭಿಮಾನಿ ಮುತ್ತು ಎಂಬವರು ತಮ್ಮ ಭುಜದ ಮೇಲೆ ಗಂಧದಗುಡಿ ಹಾಗೂ ಬೆನ್ನಿನ ಮೇಲೆ ಅಪ್ಪು ಅವರ ಚಲನಚಿತ್ರಗಳ ಹೆಸರುಗಳನ್ನು ಹಾಕಿಸಿಕೊಂಡು ಎಲ್ಲರ ಗಮನ ಸೆಳೆದರು.
ಇನ್ನು ಚಿತ್ರಮಂದಿರದ ಮುಂದೆ ಅಪ್ಪು ಕಟೌಟ್‌ಗೆ ಹೂಮಾಲೆಯನ್ನ ಹಾಕಿ, ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಪವರ್‌ಸ್ಟಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು. ಒಟ್ಟಿನಲ್ಲಿ ಅಪ್ಪುವಿನ ಕೊನೆಯ ಚಿತ್ರ ಗಂಧದಗುಡಿಗಾಗಿ ಕಾತುರರಾಗಿ ಕಾಯುತ್ತಿದ್ದ ಅಪ್ಪು ಅಭಿಮಾನಿಗಳು ಚಿತ್ರವನ್ನು ನೋಡಿ ಅಭಿಮಾನದಲ್ಲಿ ತೇಲಿ ಹೋದರು.
ಅಪ್ಪುವಿನ ವಿಶೇಷ ಅಭಿಮಾನಿ : ಗದಗ ತಾಲೂಕಿನ ಸಂಭಾಪುರ ಗ್ರಾಮದ ಮುತ್ತು ಹೊನ್ನರೆಡ್ಡಿ ಎಂಬ ಅಭಿಮಾನಿ ಅಪ್ಪುನ ಪ್ರತಿಯೊಂದು ಚಿತ್ರದ ಹೆಸರುಗಳನ್ನ ಮೈತುಂಬಾ ಹಚ್ಛೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಬೆನ್ನು, ಎದೆ ಮೇಲೆ ಗಂಧದಗುಡಿ, ಅಪ್ಪು ಭಾವಚಿತ್ರ ಹಾಕಿಸಿಕೊಂಡು ಬಂದ ಅಭಿಮಾನಿ ಎಲ್ಲರ ಕೇಂದ್ರ ಬಿಂದುವಾಗಿದ್ದನು.