ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ನ.28ರಂದು ಉಡುಪಿಗೆ ಭೇಟಿ ನೀಡಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಉಡುಪಿ ಮಠಕ್ಕೆ ತೆರಳಿ ಶ್ರೀ ಕೃಷ್ಣನ ದರುಶನ ಪಡೆಯಲಿದ್ದಾರೆ. ತದನಂತರ ‘ಲಕ್ಷಕಂಠ ಗೀತೆ’ ಮಹಾ ಪಾರಾಯಣ ಕಾರ್ಯಕ್ರಮ ನೆರವೇರಲಿದೆ.
ಕರಾವಳಿ ಪ್ರಾಂತ್ಯದ ಪವಿತ್ರ ದೇವಾಲಯ ನಗರಿ ಉಡುಪಿ, 28-11-2025ರಂದು ಅನನ್ಯವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದೆ. ಭಾರತದ ಮಾನನೀಯ ಪ್ರಧಾನಿ ಮೋದಿ, ಐತಿಹಾಸಿಕ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ, ನಂತರ ಭಗವದ್ಗೀತೆಯ ಶ್ಲೋಕಗಳನ್ನು ಒಂದು ಲಕ್ಷ ಜನರು ಏಕಕಂಠದಲ್ಲಿ ಪಠಿಸುವ ‘ಲಕ್ಷಕಂಠ ಗೀತೆ’ ಮಹಾಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿ ಆಗಮಿಸುವಾಗ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರು ಹಾಗೂ ಮಠದ ಪ್ರತಿಷ್ಠಿತ ಗಣ್ಯರಿಂದ ಸಾಂಪ್ರದಾಯಿಕ ಸ್ವಾಗತ ಸಲ್ಲಿಸಲಾಗುತ್ತದೆ. ನಂತರ ಪ್ರಧಾನಿ ಮೋದಿ, ವಿಶ್ವದ ಲಕ್ಷಾಂತರ ಭಕ್ತರಿಗೆ ಭಕ್ತಿನಿಲಯವಾಗಿರುವ ಎಂಟು ಶತಮಾನಗಳ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದರುಶನ ಮಾಡಲಿದ್ದಾರೆ.
ದೇವಾಲಯ ದರುಶನ ನಂತರ ಮೋದಿ, 100,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯತಿಗಳು, ಪಂಡಿತರು, ಹಾಗೂ ವಿವಿಧ ವಲಯಗಳ ಜನರು ಏಕಕಂಠದಲ್ಲಿ ಭಗವದ್ಗೀತೆಯನ್ನು ಪಠಿಸುವ ಈ ಐತಿಹಾಸಿಕ ಗೀತಾಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು, ಶ್ರೀ ಮಧ್ವಾಚಾರ್ಯರ ಪರಂಪರೆಯನ್ನು ಮುಂದುವರಿಸುತ್ತಾ ತಮ್ಮ ಐತಿಹಾಸಿಕ ನಾಲ್ಕನೇ ಪರ್ಯಾಯವನ್ನು “ವಿಶ್ವ ಗೀತೆ ಪರ್ಯಾಯ” ಎಂದು ಘೋಷಿಸಿ, ಜಗತ್ತಿನಾದ್ಯಂತದ ಭಕ್ತರನ್ನು ಒಳಗೊಂಡು ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.
ಗೀತಾಪಾರಾಯಣ ಹಾಗೂ ಪ್ರಧಾನಮಂತ್ರಿಯನ್ನು ಒಮ್ಮೆ ಕಾಣುವುದಕ್ಕಾಗಿ ಭಕ್ತರು ಅಪಾರ ಉತ್ಸಾಹದಿಂದ ಕಾಯುತ್ತಿದ್ದಾರೆ. ಸಾರ್ವಜನಿಕರ ಸುಗಮ ಪ್ರವೇಶ ಹಾಗೂ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸ್ಥಳೀಯ ಆಡಳಿತವು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. 2025ರ ನವೆಂಬರ್ 28ರಂದು ಬೆಳಿಗ್ಗೆ 08.00ರಿಂದ ಮಧ್ಯಾಹ್ನ 03.00ರವರೆಗೆ ಶ್ರೀಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ.
ಈ ಹಿನ್ನೆಲೆಯಲ್ಲಿ ದರುಶನದ ಸಮಯದಲ್ಲಿ ಭಕ್ತರು ಸಹಕರಿಸಿ, ಪರಿಷ್ಕೃತ ವೇಳಾಪಟ್ಟಿಗೆ ಅನುಸರಿಸುವಂತೆ ಮಠ ಆಡಳಿತದಿಂದ ವಿನಂತಿ ಮಾಡಲಾಗಿದೆ.

