ಹೊಸದಿಗಂತ ವರದಿ, ಹಾವೇರಿ:
ಹಾವೇರಿಯಲ್ಲಿ ೨೦೨೩ ಜನವರಿಯಲ್ಲಿ ಜರುಗಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ಅದ್ಧೂರಿಯಾಗಿ ಜರುಗಿಸುವುದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅಧಿಕಾರಿಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಹಾವೇರಿ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಶನಿವಾರ ಜರುಗಿದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಿಗದಿಯಾದಂತೆ ೨೦೨೩ರ ಜನವರಿ ೬,೭ ಮತ್ತು ೮ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನವನ್ನು ಜರುಗಿಸಲಾಗುವುದು ಎಂದರು.
ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಬೇಕಾದ ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಮತ್ತು ಸಂಘ ಸಂಸ್ಥೆಗಳ ಜೊತೆ ನಡೆಸಿರುವ ಸಭೆಗಳು ಯಶಸ್ವಿಯಾಗಿವೆ. ಕೊರೊನಾದಿಂದ ಎರಡು ವರ್ಷಗಳ ಕಾಲ ಸಮ್ಮೇಳನ ನಡೆಸಲು ಆಗಿರಲಿಲ್ಲ ಈ ಬಾರಿಯ ಸಮ್ಮೇಳನವನ್ನು ಬಹಳ ಅದ್ಧೂರಿಯಾಗಿ ಜರುಗಿಸುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಸಮ್ಮೇಳನಕ್ಕೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಅತಿಥಿಗಳು ಸೇರಿದಂತೆ ೩೦ ಸಾವಿರ ಜನರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಧಾರವಾಡ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಸಮ್ಮೇಳನ ಯಶಸ್ವಿಯಾಗುವುದಕ್ಕೆ ಐದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನಿರೀಕ್ಷಿಸಲಾಗಿದ್ದು ಸ್ವಯಂ ಸೇವಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿದಮತೆ ಇತರೆ ಸಿಬ್ಬಂಧೀಗಳ ಮೂಲಕ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಒಂದು ಪ್ರಧಾನ ವೇದಿಕೆ, ಎರಡು ಉಪವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಜನೇವರಿ ೬ರಂದು ಅದ್ದೂರಿ ಮೆರವಣಿಗೆ ಆಯೋಜನೆ ಮಾಡಲಾಗುವುದು ಇದರಲ್ಲಿ ಸ್ಥಬ್ಧ ಚಿತ್ರಗಳು, ಕಲಾವಿದ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಬರುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಜಿಲ್ಲೆಯ ಎಲ್ಲ ಅಧಿಕಾರಿ ವರ್ಗ ಮತ್ತು ಸಿಬ್ಬಂಧಿಗಳಿಗೆ ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ ಶಿವರಾಮ ಹೆಬ್ಬಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮಹ್ಮದ್ ರೋಷನ್ ಹಾಗೂ ಇತರರಿದ್ದರು.