ಮತ್ತೆ ಯಾವುದೇ ಕಾರಣಕ್ಕೂ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ: ಸಚಿವ ಹೆಬ್ಬಾರ್

ಹೊಸದಿಗಂತ ವರದಿ, ಹಾವೇರಿ:

ಹಾವೇರಿಯಲ್ಲಿ ೨೦೨೩ರ ಜನವರಿ ೬,೭ ಮತ್ತು ೮ ರಂದು ಜರುಗಿಸಲು ಉದ್ದೇಶಿಸಿರುವ ೮೬ನೇ ಅಖಿಲ ಭಾರತ ಕ್ನನಡ ಸಾಹಿತ್ಯ ಸಮ್ಮೇಳನ ಮತ್ತೆ ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ ಶಿವರಾಮ ಹೆಬ್ಬಾರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೩ರ ಜ.೬,೭ ಮತ್ತು ೮ರಂದು ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ನಿರ್ಧಾರ ತಗೆದುಕೊಳ್ಳಲಾಗಿದೆ ವಿನಃ ಯಾವುದೇ ಕಾರಣಕ್ಕೂ ಸಮ್ಮೇಳನವನ್ನು ಮುಂದೂಡಲಾಗದು ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಮೇಲಿಂನತೆ ಪ್ರತಿಕ್ರಿಯಿಸಿದರು.
ಸಮ್ಮೇಳನ ಯಶಸ್ವಿಗೆ ಸಚಿವರು, ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗಿದೆ. ಇಪ್ಪತ್ತೊಂದು ಸಮಿತಿಗಳನ್ನು ರಚನೆ ಮಾಡಿದ್ದೇವೆ ಈ ಸಮಿತಿಗಳಲ್ಲಿ ತಲಾ ಐದು ಉಪ ಸಮಿತಿಗಳನ್ನು ರಚಿಸಿ ಒಂದೊಂದು ಸಮಿತಿಗೆ ಒಂದೊಂದು ಕೆಲಸದ ಜವಾಬ್ದಾರಿಯನ್ನು ನೀಡುವುದಕ್ಕೆ ನಿರ್ಧರಿಸಲಾಗಿದೆ ಎಂದರು.
ಸಮ್ಮೇಳನಕ್ಕೆ ಆಗಮಿಸುವವರಿಗೆ ಇಪ್ಪತ್ತೈದು ಸಾವಿರ ಜನಕ್ಕೆ ವಸತಿ ವ್ಯವಸ್ಥೆ ಮಾಡಲು ಚರ್ಚೆ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಸಾರಿಗೆ ವ್ಯವಸ್ಥೆ, ಆರೋಗ್ಯ, ವಸತಿ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹೀಗೆ ಎಲ್ಲ ವಿಷಯಗಳ ಕುರಿತು ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಪ್ರತಿದಿನ ಮೂರು ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ನಿರ್ಧಾರ ತಗೆದುಕೊಳ್ಳಲಾಯಿತು. ಮೈಸೂರು ದಸರಾಕ್ಕಿಂತಲೂ ಮಿಗಿಲಾಗಿ ಸಮ್ಮೇಳನದ ಸಮಯದಲ್ಲಿ ನಗರದಲ್ಲಿ ದೀಪಾಲಂಕಾರ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಎಲ್ಲರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸುವಂತೆ ಚರ್ಚಿಸಲಾಗಿದೆ. ಸಿಎಂ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಜಿಲ್ಲೆಯವರೆ ಆಗಿರುವುದರಿಂದ ಇದೊಂದು ಐತಿಹಾಸಿಕ ಸಮ್ಮೇಳನ ಆಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಮಾತನಾಡಿ, ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಹಿಂದೆ ಜರುಗಿರುವ ೮೫ ಸಮ್ಮೇಳನಕ್ಕಿಂತ ಭಿನ್ನವಾಗಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.
ಅರ್ಥಪೂರ್ಣವಾದ ಲಾಂಛನ ಮಾಡಲಾಗಿದೆ. ಜಿಲ್ಲೆಯ ದಾರ್ಶನಿಕರು, ಸಾಹಿತಿಗಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಪ್ರಮುಖ ಸ್ಥಳಗಳು, ವ್ಯಕ್ತಿಗಳು ಹೀಗೆ ಎಲ್ಲವೂ ಸಮ್ಮೇಳನದ ಲಾಂಛನದಲ್ಲಿ ಅಳವಡಿಸಲಾಗಿದೆ. ಲಾಂಛನದಲ್ಲಿ ಹೆಸರಿಲ್ಲದವರ ಹೆಸರಿನಲ್ಲಿ ಸಮ್ಮೇಳದ ವಿವಿಧ ವೇದಿಕೆಗಳಿಗೆ ಹೆಸರಿಡಲಾಗುವುದು, ಒಟ್ಟಿನಲ್ಲಿ ಲಾಂಛನದಲ್ಲಿ ಹಾವೇರಿಯ ಅಸ್ಮಿತೆಯನ್ನು ತೋರಿಸುವ ಎಲ್ಲ ಪ್ರಯತ್ನವನ್ನು ಮಾಡಲಾಗಿದ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲಕುಮಾರ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮಹ್ಮದ ರೋಷನ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!