ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರುಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಟ್ರಾಫಿಕ್ ಪೋಲೀಸರ ಮೇಲೆಯೇ ಕಾರು ಹತ್ತಿಸಿ ಪರಾರಿಯಾದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಗುರುಗ್ರಾಮ್ ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ಇನ್ಸ್ಪೆಕ್ಟರ್ ಕಾರು ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಎಎಸ್ಐ ಹರ್ಪ್ರೀತ್ ಸಿಂಗ್ ತಮ್ಮ ತಂಡದೊಂದಿಗೆ ಆರ್ಟೆಮಿಸ್ ಆಸ್ಪತ್ರೆಯ ಬಳಿ ಕಾರುಗಳನ್ನು ಪರಿಶೀಲಿಸುತ್ತಿದ್ದರು. ಸೈಬರ್ ಪಾರ್ಕ್ ಪ್ರದೇಶದಿಂದ ಬರುತ್ತಿದ್ದ ಎಸ್ ಯುವಿ ವಾಹನವನ್ನು ನಿಲ್ಲಿಸುವಂತೆ ಸನ್ನೆ ಮಾಡಿದರು. ಆದರೆ ಕಾರು ಚಾಲಕ ನಿಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಾರು ಪೋಲೀಸ್ ಅಧಿಕಾರಿಯ ಮೇಲೆ ಹತ್ತಿದ್ದು ಹರ್ಪ್ರೀತ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಆರ್ಟೆಮಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಗಾಯಗಳಲ್ಲದೆ ಅವರ ಕಾಲಿನ ಹೆಬ್ಬೆರಳು ಮುರಿದಿದೆ ಎನ್ನಲಾಗಿದೆ.
ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣರಾದವರನ್ನು ಬಂಧಿಸಲು ವಿಚಾರಣೆ ನಡೆಸಲಾಗುತ್ತಿದೆ.