ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಗೆ ವಿಮಾನ ಪ್ರಯಾಣದ ವೇಳೆ ತೊಂದರೆ ಉಂಟಾಗಿದ್ದು,ಈ ಕುರಿತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (X 2884) ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಗುವಾಹಟಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಸಿರಾಜ್ ಅವರ ವಿಮಾನ ಸಂಜೆ 7:25ಕ್ಕೆ ನಿರ್ಗಮಿಸಬೇಕಿತ್ತು. ಆದರೆ ವಿಮಾನ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಸೂಕ್ತ ಸಮಯಕ್ಕೆ ಹಾರಲು ಸಾಧ್ಯವಾಗಲಿಲ್ಲ. ಈ ಕುರಿತು ಮಾಹಿತಿ ಕೇಳಿದರೆ ವಿಮಾನಯಾನ ಸಂಸ್ಥೆ ಸ್ಪಷ್ಟ ವಿವರಣೆ ನೀಡಿಲ್ಲ. ಇದರಿಂದಾಗಿ ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಗೊಂದಲಕ್ಕೆ ಸಿಲುಕುವಂತಾಯಿತು ಎಂದು ಟೀಮ್ ಇಂಡಿಯಾ ವೇಗಿ ಆರೋಪಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿರಾಜ್, “ಗುವಾಹಟಿಯಿಂದ ಹೈದರಾಬಾದ್‌ಗೆ ಹೋಗುವ ಏರ್ ಇಂಡಿಯಾ ವಿಮಾನ ಸಂಖ್ಯೆ IX 2884 ಸಂಜೆ 7:25 ಕ್ಕೆ ಹೊರಡಬೇಕಿತ್ತು, ಆದರೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಪದೇ ಪದೇ ಕೇಳಿದ ನಂತರವೂ, ಅವರು ಯಾವುದೇ ಸರಿಯಾದ ಕಾರಣವನ್ನು ನೀಡದೆ ವಿಮಾನವನ್ನು ವಿಳಂಬ ಮಾಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ಇದು ಯಾವುದೇ ಪ್ರಯಾಣಿಕರ ಮೂಲ ನಿರೀಕ್ಷೆಯಾಗಿದೆ. ವಿಮಾನ ಹೊರಡುವುದು 4 ಗಂಟೆಗಳಷ್ಟು ವಿಳಂಬವಾಯಿತು. ವಿಮಾನಯಾನ ಸಂಸ್ಥೆಯ ಕೆಟ್ಟ ಅನುಭವ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಿರಾಜ್ ಬಳಿ ಕ್ಷಮೆಯಾಚಿಸಿದ ಏರ್ ಇಂಡಿಯಾ
ಸಿರಾಜ್ ಅವರು ಪೋಸ್ಟ್ ಹಂಚಿಕೊಂಡ ಕೂಡಲೇ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್, “ಅನಿರೀಕ್ಷಿತ ಕಾರ್ಯಾಚರಣೆಯ ಕಾರಣಗಳಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ. ತನ್ನ ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲಾ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆಗಳೊಂದಿಗೆ ಸಹಾಯ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂದು ನಮಗೆ ಅರ್ಥವಾಗಿದೆ, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಯನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ ಎಂದು ಹೇಳಿದೆ.

