ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ವಿಶ್ವದಲ್ಲಿ ಅಬ್ಬರಿಸುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ೩೦೦ ಕೋಟಿಯತ್ತ ಮುನ್ನುಗುತ್ತಿದೆ. ಇಂದು ಸಿನಿಮಾ ಯಶಸ್ಸಿನ ಹಿನ್ನೆಲೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ಧರ್ಮಸ್ಥಳಕ್ಕೆ ಆಗಮಿಸಿದ ರಿಷಬ್ ದಂಪತಿ ದೇವರ ದರುಶನ ಪಡೆದು ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು.ನಟ ಪ್ರಮೋದ್ ಶೆಟ್ಟಿ ಕೂಡಾ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ , ಸಿನಿಮಾ ತಯಾರಿ ಮೊದಲು ಧರ್ಮಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬoಧವಿದೆ. ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ದೇವರೇ ಸಿನಿಮಾ ನೋಡಿ ಆಶೀರ್ವದಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.