ಹೊಸದಿಗಂತ ವರದಿ,ಗದಗ:
ನಗರದ ಐಡಿಬಿಐ ಹಾಗೂ ಯುನಿಯನ್ ಬ್ಯಾಂಕ್ಗಳಲ್ಲಿ ನಕಲಿ ಬಂಗಾರವನ್ನು ಅಡವಿಟ್ಟು ಕೋಟಿ, ಕೋಟಿ ರೂಗಳನ್ನು ಸಾಲ ಪಡೆದು ಬ್ಯಾಂಕ್ಗಳಿಗೆ ಮೋಸ ಮಾಡಿದ ಪ್ರಕರಣ ಬಯಲಿಗೆ ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಅವರು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಿಂಗ್ಪಿನ್ ದತ್ತಾತ್ರೆಯ ಬಾಕಳೆ, ಶಿವಮೂಗ್ಗ ಮೂಲದ ಅರುಣಕುಮಾರ, ನಗರದ ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಗಣೇಶ ಹೊಂಬಳ, ಮಾಣಿಕ ಲಕ್ಕುಂಡಿ, ದಾನೇಶ ಉಮಾದಿ, ರಾಕೇಶ ನವಲಗುಂದ, ಮಂಜುನಾಥ ಹೊಸಮನಿ, ಸುಚೀತಕುಮಾರ ಹರಿವಾನ, ದುಂಡಪ್ಪ ಕೊಟ್ಟೂರಶೆಟ್ಟರ, ಸಿದ್ದಾರ್ಥ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ ಹರಿವಾಣ, ಸಂತೋಷ ವೀರಶೆಟ್ಟಿ ಇವರುಗಳು ತಮ್ಮ ಬಳಿ ಇರುವ ಅಭರಣಗಳಿಗೆ ಮೇಲೆ ಸ್ವಲ್ಪ ಪ್ರಮಾಣದ ಬಂಗಾರ ಲೇಪನ ಮಾಡಿ, ಒಳಗಡೆ ಬೇರೆ ಲೋಹ ಇದೆ ಎಂದು ಗೊತ್ತಿದ್ದು ಸಂಪೂರ್ಣ ಬಂಗಾರದ ಅಭರಣಗಳು ಎಂದು ಸುಳ್ಳು ಹೇಳಿ ಐಡಿಬಿಐ ಬ್ಯಾಂಕ್ನಲ್ಲಿ 4871.04 ಗ್ರಾಂ ತೂಕದ ಬಂಗಾರ ಲೇಪನದ ಬ್ರಾಸ್ಲೇಟ್ ಹಾಗೂ ಚೈನ್ಗಳನ್ನು ಅಡವಿಟ್ಟು 1,43,34,000 ರೂ.ಗಳನ್ನು ಸಾಲ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಬ್ಯಾಂಕಿನ ಜ್ಯುವೇಲ್ ಅಪ್ರೇಜರ್ ಸುರೇಶ ರೇವಣಕರ ಮೇಲಿನ ಆರೋಪಿಗಳೊಂದಿಗೆ ಶಾಮೀಲಾಗಿ ಅಡವಿಟ್ಟ ಆಭರಣಗಳು 22 ಕ್ಯಾರೇಟ್ ಬಂಗಾರದ ಆಭರಣಗಳು ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಅವರೊಂದಿಗೆ ಭಾಗಿಯಾಗಿದ್ದಾರೆ.
ಅದೇರೀತಿ ಯುನಿಯನ್ ಬ್ಯಾಂಕ್ನಲ್ಲಿ 4983.2 ಗ್ರಾಂ ತೂಕದ ನಕಲಿ ಬಂಗಾರವನ್ನು ಅಡವಿಟ್ಟು 1,57,66,253 ರೂ.ಗಳನ್ನು ಸಾಲ ಪಡೆದು ಬ್ಯಾಂಕ್ಗಳಿಗೆ ವಂಚಿಸಿದ್ದಾರೆ ಈ ಬಗ್ಗೆ ಎರಡು ಬ್ಯಾಂಕ್ ಮ್ಯಾನೇಜರ್ಗಳು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾ ದೇವರಾಜು ಅವರು ಹೇಳಿದರು.