ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಮಟ್ಟದ ಸಮಾವೇಶಕ್ಕೆ ಪ್ರಧಾನಿ ಮೋದಿ ಬರುವ ಸಾಧ್ಯತೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ,ವಿಜಯನಗರ:

ಕಾಂಗ್ರೆಸ್ ನವರಂತೆ ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ, ನಾವು ನುಡಿದಂತೆ ನಡೆಯುವ ಮೂಲಕ ಎಸ್ಟಿ ಹಾಗೂ ಎಸ್ಸಿ ಅವರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ, ಬಳ್ಳಾರಿಯಲ್ಲಿ ಆಯೋಜಿಸಿರುವ ಎಸ್ಟಿ ಮೋರ್ಚಾ ರಾಜ್ಯಮಟ್ಟದ ಸಮಾವೇಶಕ್ಕೆ ಪ್ರಧಾನಮಂತ್ರಿ ಮೋದಿಜೀ ಬರುವ ಸಾಧ್ಯತೆಯಿದೆ, ಸಿ.ಎಂ.ಬೊಮ್ಮಾಯಿ, ಬಿಎಸ್ ವೈ ಅವರು ಸೇರಿದಂತೆ ಅನೇಕ ಗಣ್ಯರು ಸಾಕ್ಷೀಯಾಗಲಿದ್ದಾರೆ, ಸಮುದಾಯದವರಿಂದ ಅವರಿಗೆ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸೋಣ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಅವರು ಹೇಳಿದರು.
ನಗರದ ಪಟೇಲ್‌ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಬಳ್ಳಾರಿಯಲ್ಲಿ ನ.20ರಂದು ನಡೆಯಲಿರುವ ಎಸ್ಟಿ ಮೋರ್ಚಾ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಎಸ್ಟಿ ಸೇರಿದಂತೆ ದಲಿತ ಸಮುದಾಯದ ಪರವಾಗಿದ್ದು, ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಬಳ್ಳಾರಿಯಲ್ಲಿ ನ.20ರಂದು ಆಯೋಜಿಸಿದ ಎಸ್ಟಿ ಸಮಾವೇಶಕ್ಕೆ ಮೋದಿಜೀ ಸೇರಿ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ, ಈ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೋಬ್ಬರೂ ಶ್ರಮಿಸಬೇಕು ಎಂದು‌ ಕರೆ ನೀಡಿದರು. ನಮ್ಮ ಎಸ್ಟಿ ಸಮುದಾಯಕ್ಕೆ 40 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ, ಅದೂ ಈ ಬಿಜೆಪಿ ಸರ್ಕಾರದಿಂದ ಎಂದು ಮರೆಯಕೂಡದು. ನಮ್ಮಲ್ಲೆರ ಹೋರಾಟದ ಶ್ರಮಕ್ಕೆ ಬೆಲೆ ಸಿಕ್ಕಿದೆ. ಎಸ್ಟಿ ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿರಲಿಲ್ಲ, ಇದೀಗ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ದಲಿತ ಸಮುದಾಯದವರು ಕೇವಲ ರಾಜಕೀಯವಾಗಿ ಬೆಳೆದರೇ ಸಾಲದು, ಶಿಕ್ಷಣ ಹಾಗೂ ಉದ್ಯೋಗದಲ್ಲೂ ಮುಂದುವರೆಯಬೇಕು ಎಂದು ಸರ್ಕಾರ ಮೀಸಲಾತಿಯನ್ನು ಹೆಚ್ಚಳ ಮಾಡಿದೆ ಎಂದರು. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಸುಮಾರು 4ಲಕ್ಷ‌ ಜನರು ಸೇರಬೇಕು, ಇದು ಸಮುದಾಯದಿಂದ ಪಕ್ಷದ ನಾಯಕರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಹೇಳುವ ಸಮಾವೇಶ ಇದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೋಬ್ಬರೂ ಸಮಾವೇಶದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಶಿವನಗೌಡ ನಾಯಕ್ ಅವರು ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರಾರಂಭಿಸಿದ್ದು, ಪ್ರತ್ಯೇಕವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಗಂಗಾ ಕಲ್ಯಾಣ ಮೂಲಕ ನಮ್ಮ ಸಮುದಾಯದವರಿಗೆ ನ್ಯಾಯ ಕಲ್ಪಿಸಿದ್ದು, ಪ್ರತ್ಯೇಕ ಸಚಿವಾಲಯ ನಿರ್ಮಾಣ ಮಾಡಿದ್ದು, ಬಿಜೆಪಿ ಸರ್ಕಾರ, ಇದನ್ನು ಜನರು ಅರ್ಥಮಾಡಿಕೊಳ್ಳಬೇಕು, ಎಸ್ಸಿ ಹಾಗೂ ಎಸ್ಟಿ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು, ಬಿಜೆಪಿ ಸರ್ಕಾರ, ಅಷ್ಟಕ್ಕೆ‌ ಸೀಮಿತವಾಗದೇ ಸುಗ್ರಿವಾಜ್ನೆ ಮೂಲಕ ಅನುಷ್ಠಾನಕ್ಕೆ ತಂದಿದೆ, ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!