ಹೊಸದಿಗಂತ ವರದಿ ಮಡಿಕೇರಿ:
ಇಂಧನ ಎನ್ನುವ ಪದದಲ್ಲಿಯೇ ವಿಶೇಷ ಅರ್ಥವಿದೆ. ಇಂಧನ ಎಂದರೆ ಇಂ – ಧನ ಅಂದರೆ ಇಂದಿನ ಧನ. ವಾಹನ ಚಾಲನೆಗಿರುವ ಪೆಟ್ರೋಲ್, ಡೀಸೆಲ್ ಅಥವಾ ಅಡುಗೆ ಅನಿಲ, ನೈಸರ್ಗಿಕ ಇಂದನಗಳು. ಇವೆಲ್ಲವೂ ಇಂದಿನ ಧನಗಳಾಗಿದ್ದು ಮನುಷ್ಯ ಮಾತ್ರವಲ್ಲದೆ ದೇಶದ ಆರ್ಥಿಕ ವ್ಯವಸ್ಥೆಯ ಮೂಲವೂ ಆಗಿದೆ. ಅವುಗಳನ್ನು ಅನಾವಶ್ಯಕ ಉಪಯೋಗಿಸಿ ವ್ಯರ್ಥಮಾಡಬಾರದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ಬೋಧಕ, ಸಾಹಿತಿ ಪಿ.ಎಸ್.ವೈಲೇಶ್ ನುಡಿದರು.
ಅರಮೇರಿ ಕಳಂಚೇರಿ ಶ್ರೀ ಮಠದಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದ 204 ನೇ ಮಾಸಿಕ ತತ್ತ್ವಚಿಂತನಾಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಇಂಧನ ಮತ್ತು ಇಂಧನದ ಕಾರ್ಯಕ್ಷಮತೆ ಕುರಿತು ಅವರು ಮಾತನಾಡಿದರು. ವಾಹನದ ಚಾಲನೆ ಮಾಡುವಾಗ ನಿಗದಿತ ವೇಗದಲ್ಲಿ ಚಾಲಿಸುವುದು, ಅನಗತ್ಯ ಬ್ರೇಕ್ ಹಾಕದಿರುವುದು, ಕ್ಲಚ್’ನ ಮೇಲೆ ಕಾಲಿರಿಸದಿರುವುದು, ಚಕ್ರದಲ್ಲಿ ಗಾಳಿಯ ಒತ್ತಡವನ್ನು ಪರೀಕ್ಷಿಸುವುದು ಮೊದಲಾದ ಕ್ರಮಗಳು ವಾಹನದಲ್ಲಿ ಇಂಧನದ ಕ್ಷಮತೆಯನ್ನು ಹೆಚ್ಚಿಸುತ್ತವೆ ಎಂದು ಇಂಧನದ ಕಾರ್ಯಕ್ಷಮತೆಯನ್ನು ಹೇಗೆ ಹೆಚ್ಚಿಸಬಹುದೆಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಲಾರ್ಡ್ಸ್ ಡ್ರೈವಿಂಗ್ ಶಾಲೆಯ ಪ್ರಾಂಶುಪಾಲ ಬೆನೆಡಿಕ್ಟ್ ಸಲ್ಡಾನಾ ಅವರು, ವಾಹನ ಚಾಲನೆಯಲ್ಲಿ ಆಗುವ ಅಪರಾಧಗಳ ಬಗ್ಗೆ ಕಾನೂನಿನ ಮಾಹಿತಿ ನೀಡಿದರು. ವಾಹನದ ಸುಸ್ಥಿತಿ, ಇನ್ಶುರೆನ್ಸ್’ನ ಅವಶ್ಯಕತೆ, ವಾಹನದ ಕಾರ್ಯಕ್ಷಮತೆ ಮತ್ತು ವಾಹನದ ಹೊಗೆ ಉಗುಳುವಿಕೆಯ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡುವ ಮೂಲಕ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ಕೂಡಾ ನಮ್ಮ ಮೇಲಿದೆ ಎಂದರು.
ಪುಸ್ತಕ ಲೋಕಾರ್ಪಣೆ: ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಕಿಗ್ಗಾಲು ಎಸ್ ಗಿರೀಶ್ ಅವರ ಕಥಾಸಂಕಲನ ‘ಆಧುನಿಕ ಬೇತಾಳ ಕಥೆಗಳು’ ಮತ್ತು ಪತ್ತೆದಾರಿ ಕಾದಂಬರಿ ‘ಸಂಕದಲ್ಲಿ ಸಿಲುಕಿದ ಶವ’ ಎಂಬ ಎರಡು ಕೃತಿಗಳನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪಿ ಕೇಶವ ಕಾಮತ್ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲೂ ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಸಾಹಿತ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುವುದನ್ನು ಶ್ಲಾಘಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಗಿನ ಲೇಖಕರ ಮತ್ತು ಸಾಹಿತಿಗಳ ಪುಸ್ತಕ ಮಾರಾಟ ಮಾಡಲು ನೂತನ ಯೋಜನೆ ಹಾಕಿಕೊಂಡಿದ್ದು, ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೊಡಗಿನ ಲೇಖಕರ ಪುಸ್ತಕಗಳನ್ನೇ ನೆನಪಿನ ಕಾಣಿಕೆಯಾಗಿ ನೀಡುವ ವ್ಯವಸ್ಥೆ ಮಾಡುತ್ತಿರುವುದಾಗಿ ನುಡಿದರು. ಅದರ ಪ್ರತಿಫಲವಾಗಿ ಗೋಣಿಕೊಪ್ಪಲಿನ ದಸರಾ ಉತ್ಸವದ ಕಾರ್ಯಕ್ರಮದಲ್ಲಿ ಕೊಡಗಿನ ಲೇಖಕರ ಮುನ್ನೂರು ಪುಸ್ತಕಗಳನ್ನು ನೀಡಿರುವುದಾಗಿ ತಿಳಿಸಿದರು.
ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ತಮ್ಮ ಮಠದಲ್ಲಿ ಹೊಂಬೆಳಕು ಮಾಸಿಕ ತತ್ತ್ವಚಿಂತನಾಗೋಷ್ಠಿ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಅದು ಇಂದು 204 ನೆಯ ಕಾರ್ಯಕ್ರಮವಾಗಿದೆ. ಕೊರೋನಾ ಸಂದರ್ಭ ಬಿಟ್ಟರೆ ಸುಮಾರು ಐದು ವರ್ಷಗಳಿಂದ ನಿರಂತರವಾಗಿ ಕನ್ನಡದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಯೊಂದು ಈ ರೀತಿಯ ಕನ್ನಡದ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
ಜಿಲ್ಲೆಯ ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಅವರು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಲೇಖಕರು ಸಾಹಿತ್ಯಿಕ ಕೃತಿಗಳನ್ನು ಹೊರತರುತ್ತಿದ್ದು ಓದುಗರು ಕೂಡ ಆಸಕ್ತಿ ತೋರುತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು, ಇಂಧನವು ಅಮೂಲ್ಯವಾದುದು ಅದನ್ನು ಮಿತವಾಗಿ, ಹಿತವಾಗಿ, ಎಚ್ಚರಿಕೆಯಿಂದ ಬಳಸಬೇಕು. ದೇಶದ ಆರ್ಥಿಕ ವ್ಯವಸ್ಥೆ ಇಂಧನ ಉಪಯೋಗಿಸುವ ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಮೇಲೆ ಅವಲಂಬಿತವಾಗಿದೆ ಎಂದರು. ಶ್ರೀಮಠದ ಶಾಲೆಯ ವಿದ್ಯಾರ್ಥಿನಿಯರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.