March 10, 2026
Tuesday, March 10, 2026
spot_img

‘ಗೊಂದಲ’ಕ್ಕೆ ತೆರೆ: ಸಿಎಂ-ಡಿಸಿಎಂ ಒಂದೇ ಬಣ.. ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆ ಸುರೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯಗಳ ಕುರಿತಾದ ಎಲ್ಲಾ ಗೊಂದಲಗಳಿಗೆ ಇಬ್ಬರೂ ನಾಯಕರು ತೆರೆ ಎಳೆದಿದ್ದಾರೆ ಮತ್ತು ಸ್ಪಷ್ಟನೆ ನೀಡಿದ್ದಾರೆ ಎಂದು ಬಮುಲ್ ಅಧ್ಯಕ್ಷ ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ದೆಹಲಿಯಲ್ಲಿ ಘೋಷಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲ ಗೊಂದಲಗಳು ಬಗೆಹರಿದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಇನ್ನೂ ಏನಾದರೂ ಸಣ್ಣ ವಿಷಯಗಳು ಇದ್ದರೆ ಅದನ್ನು ವರಿಷ್ಠರು ಬಗೆಹರಿಸುತ್ತಾರೆ. ಇಬ್ಬರೂ ನಾಯಕರು ಈಗಾಗಲೇ ಸ್ಪಷ್ಟನೆ ನೀಡಿರುವುದರಿಂದ ಹೆಚ್ಚು ವ್ಯಾಖ್ಯಾನಗಳು ಅನಗತ್ಯ” ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿಲುವಿನ ಬಗ್ಗೆ ಒತ್ತಿಹೇಳಿದ ಸುರೇಶ್, “ಶಿವಕುಮಾರ್ ಅವರ ಮಾತು ಒಂದೇ, 140 ಶಾಸಕರು ನಮ್ಮವರೇ. ಅವರು ಪಕ್ಷದ ರಾಜ್ಯ ಅಧ್ಯಕ್ಷರು” ಎಂದು ಈ ಹಿಂದೆಯೂ ಹೇಳಿದ್ದರು, ಈಗಲೂ ಹೇಳುತ್ತಾರೆ ಎಂದು ತಿಳಿಸಿದರು.

ತಮ್ಮ ಹಳೆಯ ಹೇಳಿಕೆ ತಿರುಚಿರುವುದಾಗಿ ಸ್ಪಷ್ಟನೆ ನೀಡಿ, “ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಬೇರೆ ರೀತಿ ಇತ್ತು. ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಆದಾಗ್ಯೂ, ಇಬ್ಬರೂ ನಾಯಕರು ಇಂದು ಸ್ಪಷ್ಟನೆ ನೀಡಿರುವ ಕಾರಣ ಈ ವಿಚಾರವನ್ನು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಅಂತಿಮವಾಗಿ, “ಇಬ್ಬರೂ ನಾಯಕರು ಖುದ್ದಾಗಿ ಮಾಧ್ಯಮಗಳ ಮುಂದೆಯೇ ಮಾತನಾಡಿದ್ದಾರೆ. ಈಗ ಮತ್ತೊಬ್ಬರು ಮಾತನಾಡುವುದರಿಂದ ಹೆಚ್ಚಿನ ಅರ್ಥ ಬರುವುದಿಲ್ಲ” ಎಂದು ಹೇಳುವ ಮೂಲಕ ಸಿಎಂ-ಡಿಸಿಎಂ ನಡುವಿನ ಭಿನ್ನಾಭಿಪ್ರಾಯದ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !