ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಧವಾರ (ನವೆಂಬರ್ 23, 2022) ಮುಂಜಾನೆ ಮಹಾರಾಷ್ಟ್ರದ ನಾಸಿಕ್ ಬಳಿ ಲಘು ಭೂಕಂಪ ಸಂಭವಿಸಿದೆ. ನಾಸಿಕ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿ 3.6ರಷ್ಟು ಭೂಕಂಪ ಸಂಭವಿಸಿರುವುದಾಗಿ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪನವು 19.95 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ, 72.94 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಬಹಿರಂಗಪಡಿಸಿದೆ.
5 ಕಿಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಬೆಳಗಿನ ಜಾವ ಮನೆಗಳಲ್ಲಿ ಗಾಢ ನಿದ್ದೆಯಲ್ಲಿದ್ದ ಜನ ಭೂಕಂಪನದಿಂದ ಭಯಭೀತರಾಗಿದ್ದರು. ಏನಾಯಿತು ಎಂದು ತಿಳಿಯದೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಮಂಗಳವಾರ, ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಕಾರ್ಗಿಲ್ ಜಿಲ್ಲೆಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು ಕಾರ್ಗಿಲ್ನಿಂದ ಉತ್ತರಕ್ಕೆ 191 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪದೇ ಪದೇ ಸಂಭವಿಸುವ ಭೂಕಂಪಗಳಿಂದ ಜನರು ತೀವ್ರ ಭಯಭೀತರಾಗಿದ್ದಾರೆ.