January16, 2026
Friday, January 16, 2026
spot_img

ಬೌಲರ್‌ಗಳ ಬೆಂಡೆತ್ತಿದ ಅಭಿಷೇಕ್ ಶರ್ಮಾ: ಟಿ20ಯಲ್ಲಿ 2ನೇ ಅತಿ ವೇಗದ ಸೆಂಚುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್​ನಲ್ಲಿ ಅಭಿಷೇಕ್ ಶರ್ಮಾ ಅವರ ಅಬ್ಬರ ಮುಂದುವರಿದಿದೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಅವರು ವಿಶೇಷ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೈದರಾಬಾದ್​ನ ಜಿಮ್‌ಖಾನಾ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಮತ್ತು ಬಂಗಾಳ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಮತ್ತು ಪ್ರಭ್‌ ಸಿಮ್ರಾನ್ ಸಿಂಗ್ ವಿಸ್ಫೋಟಕ ಆಟಕ್ಕೆ ಮುಂದಾದರು.

ಬಂಗಾಳದ ಅನುಭವಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕವೂ ಸಿಡಿಲಬ್ಬರ ಮುಂದುವರೆಸಿದ ಈ ಯುವ ಬ್ಯಾಟರ್, ಕೇವಲ 32 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು.

ಈ ಶತಕದೊಂದಿಗೆ, ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ 35ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ಬರೆದಿರುವ ಇನ್ನೊಬ್ಬ ಬ್ಯಾಟರ್ ಗುಜರಾತ್‌ನ ಉರ್ವಿಲ್ ಪಟೇಲ್.

ಉರ್ವಿಲ್ ಪಟೇಲ್: 2024ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 28 ಎಸೆತಗಳಲ್ಲಿ ಹಾಗೂ ಈ ಬಾರಿಯ ಟೂರ್ನಿಯಲ್ಲಿ ಸರ್ವಿಸಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಸಿಡಿಸಿ ಈ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಬ್ಯಾಟರ್ ಆಗಿದ್ದಾರೆ.

ಅಭಿಷೇಕ್ ಶರ್ಮಾ: ಈ 32 ಎಸೆತಗಳ ಶತಕಕ್ಕೂ ಮುನ್ನ, ಅವರು 2024ರ ಟೂರ್ನಿಯಲ್ಲಿ ಮಧ್ಯಪ್ರದೇಶ ವಿರುದ್ಧ ಕೇವಲ 28 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ಇದೀಗ ಮತ್ತೊಂದು ವೇಗದ ಶತಕ ಸಿಡಿಸುವ ಮೂಲಕ, 35ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಎಡಗೈ ದಾಂಡಿಗ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 52 ಎಸೆತಗಳನ್ನು ಎದುರಿಸಿ, 16 ಭರ್ಜರಿ ಸಿಕ್ಸ್ ಮತ್ತು 8 ಫೋರ್ಗಳ ನೆರವಿನಿಂದ 148 ರನ್ ಗಳಿಸಿದರು. ಇನ್ನೊಂದು ತುದಿಯಲ್ಲಿ ಪ್ರಭ್ ಸಿಮ್ರಾನ್ 35 ಎಸೆತಗಳಲ್ಲಿ 70 ರನ್ ಚಚ್ಚಿದರು. ಅಂತಿಮವಾಗಿ ರಮಣ್‌ದೀಪ್ ಸಿಂಗ್ ಕೇವಲ 15 ಎಸೆತಗಳಲ್ಲಿ 39 ರನ್ ಬಾರಿಸಿದ್ದರಿಂದ, ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 310 ರನ್ ಕಲೆಹಾಕಿತು.

Must Read

error: Content is protected !!