ಹೊಸ ದಿಗಂತ ವರದಿ, ಮಡಿಕೇರಿ:
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ 7 ಮಂದಿ ವೈದ್ಯರ ಬ್ಯಾಗ್ ಸಹಿತ ಒಂದು ದ್ವಿಚಕ್ರ ವಾಹನವನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ: ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯ ರೀತಿಯಲ್ಲಿ ಮಾಸ್ಕ್ ತೊಟ್ಟು ಆಸ್ಪತ್ರೆಗೆ ಬಂದ ಯುವಕನೊಬ್ಬ ಅಂದಾಜು ಒಂದು ಗಂಟೆಗಳ ಕಾಲ ವೈದ್ಯರು ಇಟ್ಟಿದ್ದ ಬ್ಯಾಗ್‍ಗಳ ಕೊಠಡಿಯ ಸುತ್ತ ಮುತ್ತ ಓಡಾಡಿದ್ದಾನೆ. ನಂತರ ಯಾರೂ ಇಲ್ಲದ ಸಮಯ ನೋಡಿಕೊಂಡು ಕೊಠಡಿಯಲ್ಲಿದ್ದ 7 ಬ್ಯಾಗ್‍ಗಳನ್ನು ಎಗರಿಸಿದ್ದಾನೆ. ಮಾತ್ರವಲ್ಲದೇ, ಎಲ್ಲಾ ಬ್ಯಾಗ್‍ಗಳನ್ನು ತಡಕಾಡಿ ಅದರಲ್ಲಿದ್ದ ಎಟಿಎಂ ಕಾರ್ಡ್‌ಗಳು ಹಾಗೂ ವಾಹನಗಳ ಕೀ ಎಗರಿಸಿದ್ದಾನೆ. ಬ್ಯಾಗ್‍ನಲ್ಲಿ ಸಿಕ್ಕಿದ ಒಂದು ಕೀ ಬಳಸಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಒಂದು ಆ್ಯಕ್ಟೀವ ಹೋಂಡ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದಾನೆ.
ಈ ಎಲ್ಲಾ ದೃಶ್ಯಗಳು ಆಸ್ಪತ್ರೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಶ್ವಾನದಳ, ಬೆರಳಚ್ಚು ತಜ್ಞರ ಸಹಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ಹೊಸದಲ್ಲ: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳ್ಳತನ ಘಟನೆ ನಡೆಯುತ್ತಿರುವುದು ಹೊಸದೇನಲ್ಲ. ಕೋವಿಡ್ ಮಹಾಮಾರಿ ಸಮಯದಲ್ಲೂ ಈ ರೀತಿಯ ಕಳ್ಳತನ ಪ್ರಕರಣಗಳು ನಡೆದಿವೆ. ಇದೀಗ ಮತ್ತೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ಆತಂಕ ಮೂಡಿಸಿವೆ. ಜಿಲ್ಲಾ ಆಸ್ಪತ್ರೆಗೆ ಕೊಡಗು ಮಾತ್ರವಲ್ಲದೆ ಪಿರಿಯಾಪಟ್ಟಣ, ಹುಣಸೂರು, ಹಾಸನ ಸೇರಿದಂತೆ ವಿವಿಧ ಭಾಗದಿಂದ ರೋಗಿಗಳು ಮತ್ತವರ ಸಂಬಂಧಿಕರು ಆಗಮಿಸುತ್ತಾರೆ. ಈ ಕಳ್ಳತನ ಪ್ರಕರಣಗಳಿಂದ ಆಸ್ಪತ್ರೆಯೂ ಸುರಕ್ಷಿತ ಸ್ಥಳವಲ್ಲ ಎಂಬ ಅನುಮಾನ ಮೂಡಿಸುತ್ತಿವೆ.