Tuesday, December 2, 2025

ಕೋಡಿಮಠಕ್ಕೆ ಜಿ.ಪರಮೇಶ್ವರ್ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸ್ಥಾನದ ಕುರಿತಾದ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ರಾಜ್ಯದ ಗೃಹಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ದಿಢೀರ್ ಭೇಟಿ ನೀಡಿ ಕೋಡಿಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಈ ಅನಿರೀಕ್ಷಿತ ಭೇಟಿ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಯಾವುದೇ ಮುನ್ಸೂಚನೆ ನೀಡದೆ ಗೃಹಸಚಿವರು ಭೇಟಿ ನೀಡಿದ್ದು ವಿಶೇಷ. ಶಾಸಕರು ಹಾಗೂ ಗೃಹಮಂಡಳಿ ಅಧ್ಯಕ್ಷರಾದ ಕೆ.ಎಂ. ಶಿವಲಿಂಗೇಗೌಡ ಅವರೊಂದಿಗೆ ಮಠಕ್ಕೆ ಆಗಮಿಸಿದ ಡಾ. ಜಿ. ಪರಮೇಶ್ವರ್ ಅವರು, ಕೆಲಕಾಲ ಶ್ರೀಗಳೊಂದಿಗೆ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಕುರ್ಚಿ ಕದನದ ಹಿನ್ನೆಲೆಯಲ್ಲಿ ಈ ಮಹತ್ವದ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಗೃಹಸಚಿವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ತಮ್ಮ ಭವಿಷ್ಯದ ಕುರಿತು ಶ್ರೀಗಳಿಂದ ಮಾಹಿತಿ ಕೇಳಿ, ಆಶೀರ್ವಾದ ಪಡೆದ ಬಳಿಕ ಮಠದಿಂದ ತೆರಳಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಜಿ. ಪರಮೇಶ್ವರ್ ಅವರ ಈ ರಹಸ್ಯ ಭೇಟಿಯ ನಡೆ, ರಾಜ್ಯ ರಾಜಕಾರಣದ ಮುಂದಿನ ದಿನಗಳ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಹುಟ್ಟಿಸಿದೆ.

error: Content is protected !!