ಹೊಸದಿಗಂತ ಡಿಜಿಟಲ್ ಡೆಸ್ಕ್
ದಿಲ್ಲಿಯ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಳುವ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ದೊಡ್ಡ ಗೆಲುವು ಲಭಿಸಲಿದೆ ಎಂಬುದಾಗಿ ಮತದಾನೋತ್ತರ ಸಮೀಕ್ಷೆ ತಿಳಿಸಿದೆ. ಅಶಿಕ್ಷಿತ ಮತದಾರರು ದೊಡ್ಡ ಪ್ರಮಾಣದಲ್ಲಿ ಆಪ್ ಬೆಂಬಲಿಸಿರುವುದು ಆ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಈ ಮತದಾನೋತ್ತರ ಸಮೀಕ್ಷೆಯಂತೆ, 250 ವಾರ್ಡ್‌ಗಳ ಪೈಕಿ ಆಪ್ 146-156 ಸ್ಥಾನಗಳನ್ನು ಪಡೆಯಬಹುದು. ಬಿಜೆಪಿ 84-94 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಲಾಗಿದೆ.ಹೊಸ ವಾರ್ಡ್ ವಿಂಗಡಣೆ ನಡೆದ ಬಳಿಕದ ಮೊದಲ ಚುನಾವಣೆ ಇದಾಗಿದೆ.
ಮುನ್ಸಿಪಲ್ ಕಾರ್ಪೊರೇಷನ್ ಆಫ್ ದಿಲ್ಲಿ (ಎಂಸಿಡಿ)ಯ 250 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ1349 ಅಭ್ಯರ್ಥಿಗಳು ಕಣದಲ್ಲಿದ್ದರೆ, 1.45 ಕೋಟಿ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೀಗ ಟೈಮ್ಸ್ ನೌ-ಇಟಿಜಿ ಮತದಾನೋತ್ತರ ಸಮೀಕ್ಷೆಯಲ್ಲಿ ಆಪ್‌ಗೆ 146-156, ಬಿಜೆಪಿಗೆ 84-94, ಕಾಂಗ್ರೆಸ್‌ಗೆ 6-10 ಸ್ಥಾನಗಳು ಲಭಿಸಬಹುದು ಎನ್ನಲಾಗಿದೆ.ಇಂಡಿಯಾ ಟುಡೇ ಹೇಳುವಂತೆ, ಆಪ್‌ಗೆ 149-171, ಬಿಜೆಪಿಗೆ 69-91, ಕಾಂಗ್ರೆಸಿಗೆ 3-7 ಸ್ಥಾನಗಳು ಲಭಿಸಲಿವೆ .