ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಾರೋಪಣೆಗೆ ಗುರಿಯಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಅಧ್ಯಕ್ಷರ ಕಚೇರಿಗೆ ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ್ದಾರೆ. ಕೆಲ ದಿನದ ಹಿಂದೆ ನೆತನ್ಯಾಹು ಅವರನ್ನು ಕ್ಷಮಿಸುವಂತೆ ಒತ್ತಾಯಿಸಿ ಟ್ರಂಪ್ ಅವರು ಪತ್ರ ಬರೆದ ಬೆನ್ನಲ್ಲೇ ಈ ಮಹತ್ವದ ಘಟನೆ ನಡೆದಿದೆ.
ಬೆಂಜಮಿನ್ ನೆತನ್ಯಾಹು ಅವರು ಕ್ಷಮೆಯಾಚನೆ ಕೋರಿಕೆಯನ್ನು ಅಧ್ಯಕ್ಷರ ಕಚೇರಿಗೆ ಸಲ್ಲಿಸಿದ್ದಾರೆ. ಇದು ಇಡೀ ದೇಶದ ಮೇಲೆ ಮಹತ್ವದ ಪರಿಣಾಮಗಳನ್ನು ಬೀರುವ ಅಸಾಧಾರಣವಾದ ಮನವಿಯಾಗಿದೆ ಎಂದು ಇಸ್ರೇಲ್ ಪ್ರಧಾನಿ ಕಾರ್ಯಾಲಯವು ಖಚಿತಪಡಿಸಿದೆ.
ʻಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕ್ಷಮಿಸುವಂತೆ ಒತ್ತಾಯಿಸಿ, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್‌ಜೊಗ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೆದಿದ್ದರು.
ಕಳೆದ ಮೂರು ಸಾವಿರ ವರ್ಷಗಳಿಂದ ಬಯಸಲಾಗಿರುವ ಶಾಂತಿಯನ್ನು ಸಾಧಿಸುವ ಅಂಚಿನಲ್ಲಿದ್ದೇವೆ. ಇದನ್ನು ಸಾಧ್ಯವಾಗಿಸಿದ ನೆತನ್ಯಾಹು ಅವರಿಗೆ ಕ್ಷಮೆಯಾಚನೆ ನೀಡಿ, ಅವರಿಗೆ ಇಸ್ರೇಲ್ ನ್ಯಾಯಾಂಗ ವ್ಯವಸ್ಥೆ ಮೇಲೆ ಪೂರ್ಣ ಗೌರವವಿದೆ. ‘ಬೀಬಿ’ (ನೆತನ್ಯಾಹು) ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆʼ ಎಂದು ಪತ್ರದಲ್ಲಿ ಟ್ರಂಪ್ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?
ನೆತನ್ಯಾಹು ಅವರು 2019 ರಲ್ಲಿ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಾರೋಪಣೆಗೆ ಗುರಿಯಾಗಿದ್ದರು. ಇದರಲ್ಲಿ ವಂಚನೆ, ನಂಬಿಕೆ ದ್ರೋಹ ಮತ್ತು ಶ್ರೀಮಂತ ಉದ್ಯಮಿಗಳಿಂದ ಲಂಚ ಸ್ವೀಕರಿಸಿದ ಆರೋಪಗಳಿವೆ. 2.60 ಲಕ್ಷ ಡಾಲರ್ ಮೊತ್ತದ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದು ರಾಜಕೀಯ ಲಾಭ ಮಾಡಿಕೊಟ್ಟ ಆರೋಪವನ್ನು ನೆತನ್ಯಾಹು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

