ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಆಕಾಶವಾಣಿ ಮೂಲಕ ಪಠ್ಯ ಬೋಧನೆಯ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಗೊಳಿಸಿದೆ.
ಈ ಮೂಲಕ ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ರೇಡಿಯೋ ಪಾಠವನ್ನು ಪ್ರಸಾರ ಮಾಡುತ್ತಿದೆ.
ನಾಳೆಯಿಂದ ಫೆಬ್ರವರಿ 23ರವರೆಗೆ ಆಕಾಶವಾಣಿಯಲ್ಲಿ ನಿತ್ಯ ಪಠ್ಯ ಬೋಧನೆ ನಡೆಯಲಿದೆ. 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಠ್ಯ ಬೋಧನೆ ನಡೆಯಲಿದ್ದು, ಬಾನ್ ದನಿ ಕಾರ್ಯಕ್ರಮದ ಮೂಲಕ ಪಠ್ಯ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇಲ್ಲಿ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಇಂಗ್ಲಿಷ್ ಕಲಿಕೆಯನ್ನೊಳಗೊಂಡ ಸಾಮಾನ್ಯ ಪಾಠಗಳನ್ನು 1 ರಿಂದ 9ನೇ ತರಗತಿಗಳಿಗೆ ಒಳಗೊಂಡಿದೆ. ಅದೇ ರೀತಿ 4 ಹಾಗೂ 5ನೇ ತರಗತಿಗಳಿಗೆ ಕನ್ನಡ ಮತ್ತು ಗಣಿತ ವಿಷಯಗಳ ಕಲಿವಿನ ಫಲ ಆಧಾರಿತ ಪಾಠಗಳನ್ನು ಒಳಗೊಂಡಿದೆ.
ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2.35 ರಿಂದ 3,00 ಗಂಟೆಯವರೆಗೆ ಪ್ರಸಾರಗೊಳ್ಳಲಿದ್ದು, ರಾಜ್ಯದ 13 ಆಕಾಶವಾಣಿ ಕೇಂದ್ರಗಳು ಹಾಗೂ 3 ವಿವಿಧ ಭಾರತಿ FM ಕೇಂದ್ರಗಳಿಂದ ಏಕಕಾಲದಲ್ಲಿ ರೇಡಿಯೋ ಅಲ್ಲದೆ, ಸಾಮಾನ್ಯ ಮೊಬೈಲ್, All India Radio Bangalore You Tube streaming ನಲ್ಲಿ ಮತ್ತು ಜಗತ್ತಿನಾದ್ಯಂತ Prasarabharathi news on air app ನಲ್ಲಿಯೂ ಕೇಳಬಹುದಾಗಿದೆ.