ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಕೊಡಗು ಗೌಡ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಿ.15 ರಂದು ಮಡಿಕೇರಿಯಲ್ಲಿ ಅರೆಭಾಷೆ ದಿನಾಚರಣೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಸಮಾಜಗಳ ಒಕ್ಕೂಟವು ಕೊಡಗು ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ವಿದ್ಯಾ ಸಂಘ, ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ನಿವೃತ್ತ ನೌಕರರ ಸಂಘ, ಕೊಡಗು ಗೌಡ ಮಾಜಿ ಸೈನಿಕರ ಸಂಘ, ಮದೆನಾಡು ಗೌಡ ಸಮಾಜ, ಕೊಡಗು ಗೌಡ ಮಹಿಳಾ ಒಕ್ಕೂಟ, ಮಕ್ಕಂದೂರು ಗೌಡ ಸಮಾಜ ಇವುಗಳ ಸಹಭಾಗಿತ್ವದಲ್ಲಿ ಬೆಳಗ್ಗೆ 10.30 ಗಂಟೆಗೆ ನಗರದ ಕೊಡಗು ಗೌಡ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾನು ವಹಿಸಿಕೊಳ್ಳಲಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಮಿಟ್ಟು ರಂಜಿತ್, ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್, ನಗರಸಭೆಯ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೊಡಗು ಗೌಡ ಸಮಾಜ ಹಾಗೂ ಗೌಡ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದರು.
ಅರೆಭಾಷೆ ಸಂಸ್ಕೃತಿಯನ್ನು ದಾಖಲೆಯಾಗಿ ಪರಿವರ್ತಿಸುವುದು ಹಾಗೂ ಭಾಷೆಯ ಬೆಳವಣಿಗೆಯ ಉದ್ದೇಶದಿಂದ ದಶಕಗಳ ಹಿಂದೆ ಸರ್ಕಾರಕ್ಕೆ ಒತ್ತಡ ತಂದ ಪರಿಣಾಮ 2011ರ ಡಿ.15ರಂದು ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯನ್ನು ಸರ್ಕಾರ ಘೋಷಿಸಿತು. ಈ ಹಿನ್ನೆಲೆ ಡಿ.15ನ್ನು ಅರೆಭಾಷೆ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸೂರ್ತಲೆ ಸೋಮಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ನಿರ್ದೇಶಕರಾದ ಪೈಕೆರ ಮನೋಹರ ಮಾದಪ್ಪ, ಪಾಣತ್ತಲೆ ಪಳಂಗಪ್ಪ, ಗೌರವ ಕಾರ್ಯದರ್ಶಿ ಪೇರಿಯನ ಉದಯಕುಮಾರ್ ಹಾಗೂ ಜಂಟಿ ಕಾರ್ಯದರ್ಶಿ ಅಂಬೆಕಲ್ ನವೀನ್ ಉಪಸ್ಥಿತರಿದ್ದರು.