Tuesday, December 2, 2025

ತೆಲಂಗಾಣದ ರಾಜಭವನ ಇನ್ನು ಲೋಕ ಭವನ: ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಘೋಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 25ರಂದು ಕೇಂದ್ರ ಗೃಹ ಸಚಿವಾಲಯ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗ ತಮ್ಮ ರಾಜ್ಯಪಾಲರ ಅಥವಾ ಲೆಫ್ಟಿನೆಂಟ್ ಗವರ್ನರ್‌ಗಳ ನಿವಾಸಗಳನ್ನು ರಾಜಭವನ ಅಥವಾ ರಾಜ ನಿವಾಸದಿಂದ ಲೋಕಭವನ ಅಥವಾ ಲೋಕ ನಿವಾಸ ಎಂದು ಮರುನಾಮಕರಣ ಮಾಡಲು ನಿರ್ದೇಶನ ನೀಡಿದ್ದು, ಇದೀಗ ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಬದಲಾಯಿಸಲಾಗಿದೆ. ರಾಜ್ ನಿವಾಸವನ್ನು ಲೋಕ ನಿವಾಸ ಎಂದು ಮರುನಾಮಕರಣ ಮಾಡಲಾಗಿದೆ.

ಈಗಾಗಲೇ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರಾಖಂಡ, ತ್ರಿಪುರ, ಗುಜರಾತ್ ಮತ್ತು ಒಡಿಶಾ ಈ ಬದಲಾವಣೆಗಳನ್ನು ಜಾರಿಗೆ ತಂದಿವೆ. ರಾಜಭವನ ಮತ್ತು ರಾಜ್ ನಿವಾಸಗಳ ಮರುನಾಮಕರಣದ ಬಗ್ಗೆ ತೆಲಂಗಾಣ ರಾಜ್ಯಪಾಲರ ಕಚೇರಿ ಇಂದು ಸಂಜೆ ಅಧಿಕೃತ ಘೋಷಣೆ ಮಾಡಿದೆ.

ವಿಕಸಿತ ಭಾರತದತ್ತ ನಾವು ವಿಶ್ವಾಸದಿಂದ ಸಾಗುತ್ತಿರುವಾಗ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳ ಶಕ್ತಿ ಮತ್ತು ಚೈತನ್ಯವನ್ನು ಪುನರುಚ್ಚರಿಸಲು ಈ ಮರುನಾಮಕರಣ ಮಾಡಲಾಗಿದೆ. ವಸಾಹತುಶಾಹಿ ಯುಗಕ್ಕೆ ಸಂಬಂಧಿಸಿದ ನಾಮಕರಣವನ್ನು ತೆಗೆದುಹಾಕಲು ಗೃಹ ಸಚಿವಾಲಯದ ನಿರ್ದೇಶನವನ್ನು ಅನುಸರಿಸಿ ಹೆಸರಿನ ಬದಲಾವಣೆ ಮಾಡಲಾಗಿದೆ.

ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಪಾಲರ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಹೊರಡಿಸಲಾದ ನಿರ್ದೇಶನದಲ್ಲಿ “ರಾಜ್ ಭವನ್ ಎಂಬ ಪದವು ವಸಾಹತುಶಾಹಿಯನ್ನು ನೆನಪಿಸುತ್ತದೆ. ಆದ್ದರಿಂದ 2024 ರ ರಾಜ್ಯಪಾಲರ ಸಮ್ಮೇಳನದಲ್ಲಿ ‘ರಾಜ ಭವನ್’ ಅನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲು ಸೂಚಿಸಲಾಗಿದೆ. ಅಧಿಕೃತ ಉದ್ದೇಶಗಳಿಗಾಗಿ ರಾಜ್ಯಪಾಲರ ಕಚೇರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಕಚೇರಿಗಳನ್ನು ‘ಲೋಕಭವನ’ ಅಥವಾ ‘ಲೋಕ ನಿವಾಸ್’ ಎಂದು ಹೆಸರಿಸಲು ಎಂದು ವಿನಂತಿಸಲಾಗಿದೆ” ಎಂದು ತಿಳಿಸಲಾಗಿದೆ.

error: Content is protected !!