ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶೀ ಧನಸಹಾಯದ ಮೂಲಕ ಸಾಮಾಜಿಕ ಗೊಂದಲವನ್ನು ಸೃಷ್ಟಿಸುವ ಸರ್ಕಾರೇತರ ಸಂಸ್ಥೆ (ಎನ್‌ಜಿಓ) ಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾದಕ ವ್ಯಸನದ ಕುರಿತು ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಶಾ, ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರವು ಹಲವಾರು ಎನ್‌ಜಿಒಗಳನ್ನು ಅನುಮತಿಸಿದೆ. ಆದರೆ ದೇಶದಲ್ಲಿ ಅಂತಹ ಸಂಸ್ಥೆಗಳಿಗೆ ವಿದೇಶಿ ಧನಸಹಾಯವನ್ನು ಮೇಲ್ವಿಚಾರಣೆ ಮಾಡದೇ ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.
“ಭಾರತದ ಸಮಾಜವನ್ನು ವಿಘಟಿಸಲು ಬಯಸುವ ಅನೇಕ ಎನ್‌ಜಿಒಗಳಿವೆ. ಕೆಲವು ಎನ್‌ಜಿಒಗಳು ಭಾರತದ ಸಮಾಜವನ್ನು ಹಿಂಸಿಸಲು ಬಯಸುತ್ತವೆ. ಈ ಎನ್‌ಜಿಒಗಳ ಮೇಲೆ ಯಾವುದೇ ಕರುಣೆ ತೋರಲು ಸಾಧ್ಯವಿಲ್ಲ. ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಸಮಾಜವನ್ನು ಒಡೆಯಲು ಯುತ್ನಿಸುವ ಸಂಸ್ಥೆಗಳಿಗೆ ಸರ್ಕಾರದ ನೀತಿ ಒಂದೇ ಆಗಿರುವುದಿಲ್ಲ. ಎಫ್‌ಸಿಆರ್‌ಎ (ವಿದೇಶಿ ಕೊಡುಗೆ (ನಿಯಂತ್ರಕ)) ಕಾಯಿದೆಗೆ ಬದ್ಧವಾಗಿಲ್ಲದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಅವರಿಗೆ ಯಾವುದೇ ಕರುಣೆ ಇರುವುದಿಲ್ಲ” ಎಂದು ಶಾ ಹೇಳಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸದಸ್ಯ ಗೌರವ್ ಗೊಗೊಯ್, ವಿದೇಶಿ ಕೊಡುಗೆ (ನಿಯಂತ್ರಕ) ಕಾಯ್ದೆಯಡಿ ತನಿಖೆಗೆ ಒಳಪಡಿಸುವ ಮೂಲಕ ನಾಗರಿಕ ಸಮಾಜ ಸಂಸ್ಥೆಗಳನ್ನು ಸರಿಯಾಗಿ ಕೆಲಸ ಮಾಡಲು ಸರ್ಕಾರ ಅನುಮತಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.