ಕೊಡಗಿನಲ್ಲಿ ವಾರ್ಷಿಕ 499 ಟನ್ ಜೇನು ಉತ್ಪಾದನೆ

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ 12,897 ಜೇನು ಕೃಷಿಕರಿದ್ದು, 60,500 ಕ್ಕೂ ಅಧಿಕ ಜೇನು ಪೆಟ್ಟಿಗೆ ಮೂಲಕ ವಾರ್ಷಿಕ 499.47 ಟನ್ ಜೇನು ಉತ್ಪಾದಿಸುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹಿಂದೆ ಜೇನು ಕೃಷಿ ಒಂದು ಪ್ರಮುಖ ಉಪ ಕಸುಬು ಆಗಿ ಹೆಚ್ಚು ಪ್ರಸಿದ್ಧಿ ಹೊಂದುವುದರೊಂದಿಗೆ ರೈತರ ಜೀವನೋಪಾಯಕ್ಕೆ ಮುಖ್ಯ ಆಧಾರವಾಗಿತ್ತು.

ಆದರೆ ನಂತರದಲ್ಲಿ ಥಾಯ್ ಶಾಕ್ ಬ್ರೂಡ್ ಎಂಬ ವೈರಸ್ ರೋಗದಿಂದ ಕೊಡಗಿನಲ್ಲಿ ಜೇನು ಕೃಷಿಯು ಅವನತಿಯ ಹಾದಿ ತಲುಪಿತು. ಆದರೆ ಕಳೆದ 10-12 ವರ್ಷಗಳಲ್ಲಿ ಕೊಡಗಿನಲ್ಲಿ ಜೇನು ಕೃಷಿ ಮತ್ತೆ ಪುನಶ್ಚೇತನದ ಹಾದಿ ಹಿಡಿದಿದ್ದು, ಹೆಚ್ಚಿನ ರೈತರು ಜೇನು ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ.
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬರುವ ವಿವಿಧ ಜಾತಿಯ ಮರ, ಗಿಡ, ಬಳ್ಳಿಗಳ ಪುಷ್ಪಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ, ಕೊಡಗಿನ ಜೇನು ತುಪ್ಪದ ಉತ್ಪಾದನೆಯಾಗುತ್ತಿರುವುದರಿಂದ ಕೊಡಗಿನ ಜೇನು ಹೆಚ್ಚು ಶ್ರೇಷ್ಠವಾಗಿರುವುದರ ಜೊತೆಗೆ ಔಷಧಿಯ ಗುಣ ಹೊಂದಿದೆ. ಆದ್ದರಿಂದ ಕೊಡಗಿನ ಜೇನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಜೇನು ಹಬ್ಬ: ಕೊಡಗಿನಲ್ಲಿ ಜೇನು ಕೃಷಿಯನ್ನು ಮತ್ತಷ್ಟು ಉತ್ತೇಜನಗೊಳಿಸಲು ಜೇನು ಕೃಷಿಕರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸಹಕಾರ ಸಂಘಗಳು ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನಾ ಸಂಸ್ಥೆಯನ್ನು ಒಂದೇ ವೇದಿಕೆಗೆ ಕರೆತಂದು ಕೊಡಗಿನ ಜೇನನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಡಿ.24ಮತ್ತು 25ರಂದು ‘ಜೇನು ಹಬ್ಬವನ್ನು ಆಯೋಜಿಸಲಾಗಿದೆ.

ವಿಜ್ಞಾನಿಗಳು, ಅಧಿಕಾರಿಗಳುಜೇನು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಜೇನು ಹಬ್ಬ-2022 ರಲ್ಲಿ ಜೇನು ತುಪ್ಪ ಉತ್ಪಾದನೆ ಮಾಡುವ ರೈತರು, ಜೇನು ಸಹಕಾರ ಸಂಘ, ರೈತ ಉತ್ಪಾದನಾ ಸಂಸ್ಥೆಗಳು ಪಾಲ್ಗೊಳ್ಳಲಿದ್ದಾರೆ. ಕೊಡಗು ಜಿಲ್ಲೆ ಹಾಗೂ ಕೊಡಗಿನ ನೆರೆಯ ಜಿಲ್ಲೆಯ ರೈತರು, ಸಹಕಾರ ಸಂಘಗಳು ಈ ಜೇನು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!