ಹೊಸದಿಗಂತ ಡಿಜಿಟಲ್ ಡೆಸ್ಕ್
ʼಭಾರತದಲ್ಲಿ ಮುಸ್ಲಿಮರಿಗೆ ಉತ್ತಮ ವಾತಾವರಣ ಇಲ್ಲʼ ಎಂದು ಹೇಳಿರುವ ಬಿಹಾರದ ತೇಜಸ್ವಿ ಯಾದವ್ ಅವರ ಪಕ್ಷವಾದ ಆರ್‌ಜೆಡಿಯ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ, ʼತನ್ನ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿ ಅಲ್ಲಿಯೇ ನೆಲೆಸುವಂತೆ ಸಲಹೆ ನೀಡಿದ್ದೇನೆʼ ಎಂದು ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಾರಿ, ದೇಶದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತ ಧೋರಣೆ ಇದೆ ಎಂದು ಆರೋಪಿಸಿದ್ದಾರೆ.
“ದೇಶದ ವಾತಾವರಣವನ್ನು ವಿವರಿಸಲು ನನ್ನ ವೈಯಕ್ತಿಕ ಉದಾಹರಣೆಯನ್ನು ಉಲ್ಲೇಖಿಸಲು ಬಯಸುತ್ತೇನೆ. (ದೇಶ ಕಾ ಜೋ ಮಹೌಲ್ ಹೈ). ನನಗೆ ಹಾರ್ವರ್ಡ್‌ನಲ್ಲಿ ಓದುತ್ತಿರುವ ಒಬ್ಬ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದ ಮಗಳು ಇದ್ದಾರೆ. ನಾನು ಅವರಿಗೆ ಭಾರತಕ್ಕೆ ಬರಬೇಡಿ, ವಿದೇಶದಲ್ಲಿ ಒಳ್ಳೆಯ ಉದ್ಯೋಗ ಹುಡುಕಿ ಅಲ್ಲಿಯೇ ಸೆಟಲ್ ಆಗಿ ಎಂದು ಹೇಳಿದ್ದೇನೆ. ಜೊತೆಗೆ ಅಲ್ಲಿನ ಪೌರತ್ವವನ್ನು ಪಡೆದುಕೊಳ್ಳಲು ಹೇಳಿದ್ದೇನೆ”ಎಂದು ಕಾರ್ಯಕ್ರಮವೊಂದರಲ್ಲಿ ಹಿರಿಯ ನಾಯಕ ಹೇಳುತ್ತಿರುವುದು ಕೇಳಿಬರುತ್ತಿದೆ.
ಮಾಜಿ ರಾಜ್ಯ ಸಚಿವರೂ ಆಗಿರುವ ಸಿದ್ದಿಕಿ, “ನಾನು ಇನ್ನೂ ಇಲ್ಲಿ (ಭಾರತದಲ್ಲಿ) ವಾಸಿಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದ್ದೇನೆ. ನೀವು ಮಾತ್ರ ಈ ದೇಶಕ್ಕೆ ಬರಬೇಡಿ. ನಿಮಗೆ ಈ ದೇಶದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ.” ಎಂದು ಹೇಳಿಕೊಂಡಿದ್ದಾರೆ.
ಆರ್‌ಜೆಡಿ ನಾಯಕನ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿಯ ಬಿಹಾರ ಘಟಕವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
“ಸಿದ್ದಿಕಿ ಅವರ ಹೇಳಿಕೆಗಳು ಭಾರತ ವಿರೋಧಿಯಾಗಿದೆ. ಅವರಿಗೆ ನಮ್ಮ ದೇಶದಲ್ಲಿ ಅಷ್ಟೊಂದು ಉಸಿರುಗಟ್ಟುತ್ತಿದ್ದರೆ, ಅವರು ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ” ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದಿಕಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ (ತೇಜಸ್ವಿ ಯಾದವ್ ಅವರ ತಂದೆ) ಅವರ ಆಪ್ತ ಸಹಾಯಕರಾಗಿದ್ದಾರೆ ಮತ್ತು ಅವರ ಮಾತುಗಳು ಅವರ ಪಕ್ಷದ ಮುಸ್ಲಿಂ ತುಷ್ಟೀಕರಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ” ಎಂದು ಬಿಜೆಪಿ ನಾಯಕ ವ್ಯಂಗ್ಯವಾಡಿದ್ದಾರೆ. ಆರ್‌ಜೆಡಿ ನಾಯಕನ ಹೇಳಿಕೆಯನ್ನು ಆರ್ಜೆಡಿ ಪಕ್ಷದ ಮಿತ್ರಪಕ್ಷ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಸಮರ್ಥಿಸಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ