ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಭಿಲ್ಸಯ್ಯ ಗ್ರಾಮದಲ್ಲಿ ಮೂರು ದಿನದಲ್ಲಿ ಮೂರು ಮಕ್ಕಳು ಹಠಾತ್ ಮೃತಪಟ್ಟಿದ್ದು, ಹಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ವಿಚಿತ್ರ ಕಾಯಿಲೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದಿದ್ದಾರೆ. ಆದರೆ ಸರಿಯಾದ ಮಾಹಿತಿ ಸಿಗದ ಕಾರಣ ಕುಟುಂಬದವರು ಹಾಗೂ ಊರಿನವರು ಇದು ನಕಾರಾತ್ಮಕ ಶಕ್ತಿಯಿಂದ ಆದ ದುರ್ಘಟನೆ ಎಂದು ಭಾವಿಸಿದ್ದಾರೆ.
ಕಲ್ಯಾಣ್ ಸಿಂಗ್ ಯಾದವ್ ಅವರ ಮನೆಯಲ್ಲಿ ಡಿ.20ರಿಂದ 22ರ ಅವಧಿಯಲ್ಲೇ ಮೂರು ಮಕ್ಕಳು ಮೃತಪಟ್ಟಿದ್ದಾರೆ. ಏಳು ವರ್ಷದ ಮೊದಲ ಮಗಳು ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ರಾಧಿಕಾ ಕೊನೆಯುಸಿರೆಳೆದಿದ್ದಾರೆ.
ರಾಧಿಕಾ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದಾಗ ಅವರ ಒಂದೂವರೆ ವರ್ಷದ ಮಗು ವಿಪಿನ್ ಯಾದವ್ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಇದು ನಕಾರಾತ್ಮಕ ಶಕ್ತಿ ಕಾಟ ಎಂದು ಎಲ್ಲರೂ ಹೇಳಿದ್ದೂ, ದಂಪತಿ ದೇವಸ್ಥಾನಗಳನ್ನು ಅಲೆದಿದ್ದಾರೆ. ಒಂದು ದಿನ ಬಳಿಕ ವಿಪಿನ್ ಕೂಡ ಮೃತಪಟ್ಟಿದ್ದಾನೆ. ತದನಂತರ ಬೇರೆಡೆ ಓದುತ್ತಿದ್ದ ಮಗಳು ಸುಮನ್ ಮನೆಗೆ ಬಂದಿದ್ದಾಳೆ. ಅವಳಿಗೂ ಅನಾರೋಗ್ಯ ಕಾಡಿದೆ. ಆಕೆಯೂ ಮೃತಪಟ್ಟಿದ್ದಾಳೆ.
ಯಾವುದೇ ಸಮಸ್ಯೆಯಿಲ್ಲದೆ ಆರಾಮಾಗಿದ್ದ ಮಕ್ಕಳು ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾಗಿದ್ದು, ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಹಾಗೂ ಇದು ದೆವ್ವ ಭೂತದ ಕಾಟ ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ.
ಆರೋಗ್ಯ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಕುಟುಂಬದವರು ಇದಕ್ಕೆ ಸ್ಪಂದಿಸಿಲ್ಲ. ಇಲ್ಲಿನ ನೀರನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಐದು ಮಕ್ಕಳಿದ್ದ ದಂಪತಿ ಇದೀಗ ಮೂವರನ್ನು ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಮಕ್ಕಳಿಗೂ ಅನಾರೋಗ್ಯ ಕಾಡುತ್ತಿದ್ದು, ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ.