ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕೃಷಿ ಕ್ಷೇತ್ರದ ಪರಿವರ್ತನೆಗೆ ನೈಸರ್ಗಿಕ ಬೇಸಾಯ ಪದ್ಧತಿ ಅತ್ಯಂತ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ. ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರಸ್ನೇಹಿ ಕೃಷಿ ವಿಧಾನಗಳನ್ನು ಅನುಸರಿಸಲು ಪ್ರಧಾನಿಗಳು ಭಾರತೀಯ ರೈತರಿಗೆ ಕರೆ ನೀಡಿದ್ದಾರೆ.
ತಮ್ಮ ಲಿಂಕ್ಡ್‌ಇನ್ ಸಾಮಾಜಿಕ ಮಾಧ್ಯಮದಲ್ಲಿ ಬ್ಲಾಗ್ ಬರೆದಿರುವ ಪ್ರಧಾನಿಗಳು, ನೈಸರ್ಗಿಕ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯಲ್ಲಿ ಭಾಗವಹಿಸಿದ ಅನುಭವವನ್ನು ಅವರು ವಿವರಿಸಿದ್ದಾರೆ. ತಮಿಳುನಾಡಿನ ರೈತರು ಈ ಪದ್ಧತಿಗಾಗಿ ಹಾಕುತ್ತಿರುವ ಶ್ರಮ ತಮ್ಮನ್ನು ಅಚ್ಚರಿಗೊಳಿಸಿದೆ. ಭಾರತೀಯ ರೈತರು ಮತ್ತು ಕೃಷಿ ಉದ್ಯಮಿಗಳು ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ರೀತಿ ಬಹಳ ಭರವಸೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ನೈಸರ್ಗಿಕ ಕೃಷಿಯನ್ನು ಭಾರತದ ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಪರಿಸರೀಯ ತತ್ವಗಳ ಸುಂದರ ಸಮ್ಮಿಶ್ರಣ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಗಿಡ-ಮರಗಳು, ಜಾನುವಾರುಗಳು ಒಟ್ಟಿಗೆ ಬೆಳೆದು ನೈಸರ್ಗಿಕ ಜೀವವೈವಿಧ್ಯವನ್ನು ಬೆಂಬಲಿಸುವ ಕೃಷಿ ಭೂಮಿಯನ್ನು ಸೃಷ್ಟಿಸಲು ಅವರು ಕರೆ ನೀಡಿದ್ದಾರೆ. ಕೃಷಿ ತ್ಯಾಜ್ಯಗಳ ಮರುಬಳಕೆ ಮತ್ತು ಮಲ್ಚಿಂಗ್‌ನಂತಹ ತಂತ್ರಗಳ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಬ್ಲಾಗ್‌ನಲ್ಲಿ ತಿಳಿಸಲಾಗಿದೆ.
ಪ್ರಧಾನಿಗಳು ಕೊಯಮತ್ತೂರು ಕಾರ್ಯಕ್ರಮದಲ್ಲಿ ಭೇಟಿಯಾದ ಯಶಸ್ವಿ ರೈತರ ಅನುಭವಗಳನ್ನು ಸ್ಮರಿಸಿದ್ದಾರೆ.
ಒಬ್ಬ ರೈತ 10 ಎಕರೆ ಜಮೀನಿನಲ್ಲಿ ಬಹುಸ್ತರ ಕೃಷಿ ಅಳವಡಿಸಿ ಬಾಳೆ, ತೆಂಗು, ಪಪ್ಪಾಯ, ಕಾಳುಮೆಣಸು, ಅರಿಶಿನ ಬೆಳೆದಿರುವುದಲ್ಲದೆ, 60 ದೇಸಿ ಹಸುಗಳು, 400 ಆಡು-ಕುರಿಗಳು ಹಾಗೂ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಇನ್ನೊಬ್ಬ ರೈತ ಸ್ಥಳೀಯ ಅಕ್ಕಿ ತಳಿಗಳನ್ನು ಬೆಳೆದು, ಪ್ರೋಟೀನ್ ಬಾರ್, ಹೆಲ್ತ್ ಮಿಕ್ಸ್ ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 15 ಎಕರೆ ಜಾಗದಲ್ಲಿ ನೈಸರ್ಗಿಕ ಕೃಷಿ ನಡೆಸುವ ಪದವೀಧರ ರೈತರೊಬ್ಬರು ಪ್ರತೀ ತಿಂಗಳು 30 ಟನ್ ತರಕಾರಿ ಮಾರಾಟ ಮಾಡುವ ಸಾಧನೆ ಮಾಡಿದ್ದಾರೆ. ಈ ಯಶಸ್ಸಿನ ಕಥೆಗಳು ದೇಶದ ರೈತರಿಗೆ ಸ್ಫೂರ್ತಿ ನೀಡಿವೆ ಎಂದು ಪ್ರಧಾನಿಗಳು ಹೈಲೈಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂ ಕಿಸಾನ್ ಸೌಲಭ್ಯಗಳ ಮೂಲಕ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ ಆರ್ಥಿಕ ಮತ್ತು ಮಾನಸಿಕ ಧೈರ್ಯ ತುಂಬುತ್ತಿದೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ. ಕಳೆದ ವರ್ಷ ಜಾರಿಗೆ ಬಂದ ನೈಸರ್ಗಿಕ ಕೃಷಿ ಮಿಷನ್ ಮೂಲಕ ಲಕ್ಷಾಂತರ ರೈತರು ಸಾಂಪ್ರದಾಯಿಕ ಕೃಷಿಗೆ ಮರಳಿದ್ದಾರೆ. ಅಲ್ಲದೆ, ಸರ್ಕಾರವು ಸಿರಿಧಾನ್ಯಗಳ ಉತ್ಪಾದನೆಗೆ ಒತ್ತು ನೀಡುವ ಮೂಲಕವೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

