ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ಅಪರೂಪಕ್ಕೆ ಅಪರೂಪವಾದ ಮತ್ತು ವಿವಾದಾತ್ಮಕವಾದ ಸಾರ್ವಜನಿಕ ಮರಣದಂಡನೆಯೊಂದು ನೆರವೇರಿದೆ. ಒಂದೇ ಕುಟುಂಬದ 13 ಜನರನ್ನು ಬರ್ಬರವಾಗಿ ಹತ್ಯೆಗೈದ ಅಪರಾಧಿ ‘ಮಂಗಲ್’ ಎಂಬಾತನಿಗೆ, ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನೊಬ್ಬ ಗುಂಡು ಹಾರಿಸುವ ಮೂಲಕ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
ಈ ರೋಚಕ ಮತ್ತು ಭಯಾನಕ ಕ್ಷಣಕ್ಕೆ ಖೋಸ್ಟಾ ನಗರದ ಕ್ರೀಡಾಂಗಣದಲ್ಲಿ ಸುಮಾರು 80,000 ಜನರು ಸಾಕ್ಷಿಯಾಗಿದ್ದರು. ಅಫ್ಘಾನ್ ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ಆದೇಶ ನೀಡಿದ್ದು, ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಜಾದಾ ಅವರು ಅಂತಿಮ ಅನುಮೋದನೆ ನೀಡಿದ್ದರು.
ಮಂಗಲ್ ಎಂಬಾತ ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿ, ಅವರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 13 ಜನರನ್ನು ಹತ್ಯೆ ಮಾಡಿದ್ದ. ಈ ಅಮಾನವೀಯ ಕೃತ್ಯದ ಅಪರಾಧಕ್ಕಾಗಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ನ್ಯಾಯಾಲಯವು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಕೊಲೆಗಾರನಿಗೆ ಆ ಕುಟುಂಬದ ಸದಸ್ಯನಿಂದಲೇ ಶಿಕ್ಷೆಯನ್ನು ಜಾರಿಗೊಳಿಸಲು ಅವಕಾಶ ನೀಡಿತು. ಇದರಂತೆ, 13 ಜನರ ನಷ್ಟದ ನೋವಿನಲ್ಲಿದ್ದ ಆ ಕುಟುಂಬದ 13 ವರ್ಷದ ಬಾಲಕನಿಂದಲೇ ಈ ಕೊಲೆಗಾರನನ್ನು ಗುಂಡಿಟ್ಟು ಕೊಲ್ಲಿಸಲಾಗಿದೆ.
ಸಾರ್ವಜನಿಕ ಮರಣದಂಡನೆಗೆ ಮುನ್ನ ಕೊಲೆಗಾರ ಮಂಗಲ್‌ನನ್ನು ಮೈದಾನಕ್ಕೆ ಕರೆತರಲಾಯಿತು. ಕಾನೂನು ಕ್ರಮದಂತೆ ವೈದ್ಯರ ತಂಡವು ಆತನ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿದ ನಂತರ, ಗುಂಡಿನ ಮೂಲಕ ಮರಣದಂಡನೆಯನ್ನು ಜಾರಿಗೊಳಿಸಲಾಯಿತು.
ತಾಲಿಬಾನ್ 2021 ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ಜಾರಿಗೊಳಿಸಲಾದ 11ನೇ ಸಾರ್ವಜನಿಕ ಮರಣದಂಡನೆಯಾಗಿದೆ. ತಾಲಿಬಾನ್ ಸರ್ಕಾರದಡಿ ‘ಖಿಸಾಸ್’ ಪದ್ಧತಿಯನ್ನು ಪುನಃ ಜಾರಿಗೊಳಿಸಲಾಗಿದ್ದು, ಈ ಘಟನೆಯು ಆಡಳಿತದ ಕಠಿಣ ನ್ಯಾಯಾಂಗ ನೀತಿಗಳ ಪ್ರಬಲ ಸಂದೇಶವನ್ನು ಸಾರುತ್ತಿದೆ.

