ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉಜ್ಬೇಕಿಸ್ತಾನದ ಮಾಧ್ಯಮ ವರದಿ ಪ್ರಕಾರ ಅಲ್ಲಿ ಇತ್ತೀಚಿನ ವಿದ್ಯಮಾನದಲ್ಲಿ 18 ಮಕ್ಕಳು ಸತ್ತಿರುವುದಕ್ಕೆ ಕೆಮ್ಮಿನ ಸಿರಫ್ ಸೇವನೆಯೇ ಕಾರಣ ಹಾಗೂ ಈ ಸಿರಫ್ ಭಾರತದ ಕಂಪನಿ ತಯಾರಿಸಿರುವಂಥದ್ದು.
ಪ್ರತಿಪಕ್ಷ ಕಾಂಗ್ರೆಸ್ ಈ ವಿದ್ಯಮಾನವನ್ನು ಮೋದಿ ಸರ್ಕಾರವನ್ನು ಚುಚ್ಚುವುದಕ್ಕೆ ಬಳಸಿಕೊಳ್ಳುತ್ತಿದೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲೇ ಈ ಕೆಮ್ಮಿನ ಸಿರಫ್ ತಯಾರಿಸಿರುವ ಕಂಪನಿ ಇದೆ ಎನ್ನುವುದು ರಾಜಕೀಯ ಆಯಾಮವನ್ನು ಗಟ್ಟಿಗೊಳಿಸಿರುವ ಅಂಶ. ‘ಭಾರತವು ಜಗತ್ತಿನ ಔಷಧ ಅಂಗಡಿ ಅಂತೆಲ್ಲ ಕೊಚ್ಚಿಕೊಳ್ತಿದ್ರಲ್ಲ, ಈಗೇನು ಹೇಳ್ತೀರಿ’ ಎಂಬಂರ್ಥದಲ್ಲಿ ಕಾಂಗ್ರೆಸ್ಸಿನ ಜೈರಾಂ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ. ‘ಮೋದಿ ದ್ವೇಷದ ಭರದಲ್ಲಿ ಭಾರತದ ಉದ್ಯಮಶೀಲತೆಯನ್ನೇ ದ್ವೇಷಿಸುತ್ತಿದ್ದೀರಲ್ಲ? ಈ ಹಿಂದೆ ಇಂಥದೇ ಆರೋಪ ಬಂದಾಗ ಅದು ಸಾಬೀತಾಗಲಿಲ್ಲ. ಹೀಗಿರುವಾಗ ಮಾಧ್ಯಮ ವರದಿ ಆಧರಿಸಿ ಭಾರತಕ್ಕೆ ಕಳಂಕ ಮೆತ್ತುವುದಕ್ಕೆ ಏಕಿಷ್ಟು ಉತ್ಸುಕತೆ?’ ಎಂಬರ್ಥದಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ ಮಾಳವೀಯ ಪ್ರತಿಕ್ರಿಯಿಸಿದ್ದಾರೆ.
ಔಷಧ ಮಾರುಕಟ್ಟೆ ರಾಜಕೀಯವೇ?
ಇವತ್ತಿನ ಔಷಧ ಮಾರುಕಟ್ಟೆ ಹಲವು ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಆದರೆ, ಭಾರತದ ಕಂಪನಿಗಳ ಬಗ್ಗೆ ಹೊರದೇಶಗಳಿಂದ ವರದಿಯಾಗುವ ಪ್ರಕರಣಗಳಲ್ಲಿ ಜಾಗತಿಕ ರಾಜಕಾರಣದ ಅಂಶಗಳೂ ಅಡಗಿಕೊಂಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಫಾರ್ಮಾ ಕ್ಷೇತ್ರದಲ್ಲಿ ಭಾರತದ ಜಾಗತಿಕ ಪಾರಮ್ಯವನ್ನು ತಡೆಯುವ ನಿಟ್ಟಿನಲ್ಲೂ ಈ ಬಗೆಯ ಸುದ್ದಿಗಳು ತೇಲಿಬರುವ ಸಾಧ್ಯತೆಗಳಿರುತ್ತವೆ.
ಇದಕ್ಕೆ ಪೂರಕವಾಗಿ ಕೊಡಬಹುದಾದ ಉದಾಹರಣೆ ಎಂದರೆ ಇದೇ ಕೆಮ್ಮಿನ ಸಿರಫ್ ಗೆ ಸಂಬಂಧಿಸಿದಂತೆ ಗಾಂಬಿಯಾದಿಂದ ಈ ಹಿಂದೆ ಸೆಪ್ಟೆಂಬರಿನಲ್ಲಿ ವರದಿಯಾಗಿದ್ದ ಪ್ರಕರಣ. ಆ ಪ್ರಕರಣದಲ್ಲೂ ಅಲ್ಲಿನ ಮಕ್ಕಳ ಸಾವಿಗೆ ಭಾರತದಲ್ಲಿ ಉತ್ಪಾದನೆಯಾಗಿರುವ ಕೆಮ್ಮಿನ ಸಿರಫ್ ಕಾರಣ ಎಂದು ಹೇಳಲಾಗಿತ್ತು. ಆದರೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರವು ಆ ಮಕ್ಕಳ ಸಾವಿಗೂ ಕಾಫ್ ಸಿರಫ್ ಸೇವನೆಗೂ ಸಂಬಂಧವಿರುವ ಬಗ್ಗೆ ಸ್ಪಷ್ಟ ಸಾಕ್ಷ್ಯವನ್ನು ಕೊಡುವುದಕ್ಕೆ ಕೇಳಿದಾಗ ಗಾಂಬಿಯಾ ತನ್ನ ಧ್ವನಿ ಬದಲಿಸಿತು.
ಕೆಮ್ಮಿನ ಸಿರಫ್ ನಿಂದಲೇ ಸಾವಾಗಿದೆ ಎಂಬುದು ಶಂಕೆಯೇ ಹೊರತು ಅದನ್ನೇ ಸ್ಪಷ್ಟವಾಗಿ ಗುರಿಯಾಗಿಸುವುದಕ್ಕೆ ಪುರಾವೆ ಇಲ್ಲ ಎಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ ನೋಡಿದಾಗ ಈಗಿನ ಪ್ರಕರಣದಲ್ಲೂ ತಕ್ಷಣಕ್ಕೆ ಭಾರತದ ಔಷಧ ಕಂಪನಿಯ ಮೇಲೆ ದೂರುವುದು ಅವಸರದ ಕಾರ್ಯವಾಗಲಿದೆ.