ಲೈಟ್ ಫಿಶಿಂಗ್ ನಡೆಸುತ್ತಿದ್ದ ಮೀನುಗಾರರು ಪೊಲೀಸರ ವಶಕ್ಕೆ

ಹೊಸದಿಗಂತ ವರದಿ ಅಂಕೋಲಾ:

ತಾಲೂಕಿನ ಕಡಲ ತೀರದ ವ್ಯಾಪ್ತಿಯ ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ಬೋಟನ್ನು ಸ್ಥಳೀಯ ಗಾಬೀತ ಕೇಣಿಯ ಮೀನುಗಾರರು ಹಿಡಿದು ಅದರಲ್ಲಿದ್ದ ಕಾರ್ಮಿಕರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಕುಮಟಾದ ವ್ಯಕ್ತಿಗೆ ಸೇರಿದೆ ಎನ್ನಲಾದ ಆರ್ಯಾದುರ್ಗ ಎಂಬ ಹೆಸರಿನ ಬೋಟ್ ಲೀಸ್ ಮೇಲೆ ಪಡೆದ ಜಿಲ್ಲೆಯ ಮತ್ತು ಹೊರಜಿಲ್ಲೆಯ ಕೆಲವರು ಆಳ ಸಮುದ್ರದಲ್ಲಿ ನಿಷೇದಿತ ಲೈಟ್ ಫಿಶಿಂಗ್ ನಡೆಸುತ್ತಿರುವುದು ಗಮನಕ್ಕೆ ಬಂದ ಸ್ಥಳೀಯ ಮೀನುಗಾರರು ಬೋಟನ್ನು ಹಿಡಿದು ತಂದು ಗಾಬೀತ ಕೇಣಿ ಸಮುದ್ರ ತೀರದಲ್ಲಿ ಲಂಗರು ಹಾಕಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬೋಟ್ ಜಪ್ತು ಮಾಡುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ, ಕರಾವಳಿ ಕಾವಲು ಪಡೆ ನಿರೀಕ್ಷಕ ಸುರೇಶ ನಾಯಕ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬೋಟಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು.

ಲೈಟ್ ಫಿಶಿಂಗ್ ಬೋಟ್ ಮತ್ತು ಅದರ ಜೊತೆಗೆ ಬಂದ ಬೋಟಿನಲ್ಲಿ ಇದ್ದ ಕೆಲವರು ಸ್ಥಳೀಯ ಮೀನುಗಾರರ ಮೇಲೆ ಹಲ್ಲೆಗೆ ಯತ್ನಿಸಿದ್ದು ಬೋಟನ್ನು ಜಪ್ತು ಮಾಡುವಂತೆ ಸ್ಥಳೀಯ ಮೀನುಗಾರರಿಂದ ಗಾಬೀತಕೇಣಿ ಕಡಲ ತೀರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಅಂಕೋಲಾ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಲೈಟ್ ಫಿಶಿಂಗ್ ಬೋಟಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಂಕೋಲಾ ಪೊಲೀಸ್ ಠಾಣೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿ ಎದುರು ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮೀನುಗಾರರು ನಿಷೇದಿತ ಲೈಟ್ ಫಿಶಿಂಗ್ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!