ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿದೆ. 1 ಲಕ್ಷಕ್ಕಿಂತ ಹೆಚ್ಚು ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದ.ಕ. ಸಂಸದ ನಳಿನ್ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಈ ಅಭಿಯಾನದಲ್ಲಿ ಎಲ್ಲ ಸಚಿವರು, ಶಾಸಕರು, ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ ಇದ್ದು, ಅಭಿಯಾನ ಯಶಸ್ಸು ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಶೀಘ್ರವೇ ಜೈಲಿಗೆ
ಮಂಗಳೂರಿನಲ್ಲಿ ಇಂದು ಬೂತ್ ವಿಜಯ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯೊಳಗಡೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ಎಂದು ಕಟೀಲ್ ತಿಳಿಸಿದರು.
40% ಕಮಿಷನ್ ಕುರಿತಂತೆ ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ಕಾಂಗ್ರೆಸ್ 100% ಭ್ರಷ್ಟಚಾರಿಗಳ ಪಕ್ಷವಾಗಿದೆ. ಕಾಂಗ್ರೆಸ್ ಭ್ರಷ್ಟಚಾರಿಗಳ ಪಕ್ಷ, ಭ್ರಷ್ಟಚಾರದ ಪಿತಾಮಹರು ಆ ಪಕ್ಷದಲ್ಲಿದ್ದಾರೆ.ಭ್ರಷ್ಟಚಾರಿಗಳಲ್ಲಿ ಮಹಾಭ್ರಷ್ಟಚಾರಿಗಳು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದರು.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ? , 40% ದಾಖಲೆಗಳಿದ್ದರೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು ಎಂದು ಸವಾಲು ಹಾಕಿದರು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಇದು ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವಾಗಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂತ್ರಿ ಸ್ಥಾನಕ್ಕೆ ಹಲವರ ನಡುವೆ ಪೈಪೋಟಿ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ನಲ್ಲಿ ಬೂತ್ ಕೆಲಸ ಮಾಡಲು ಒಬ್ಬ ಹಿಂದೂ ಸಿಗುವುದಿಲ್ಲ. ಆದ್ದರಿಂದ ಮುಂದಿನ 15 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎಂಟೂ ಸ್ಥಾನದಲ್ಲೂ ಬಿಜೆಪಿ ವಿಜಯ ಸಾಧಿಸಲಿದೆ ಎಂದರು.
ಡಿ.ಕೆ. ಶಿವಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್ ಒಡೆದು ಮೂರು ಚೂರಾಗಿದೆ. ಆದರೆ ನಾನು ರಾಜ್ಯಾಧ್ಯಕ್ಷನಾದ ಬಳಿಕ ಬಿಜೆಪಿ ಒಂದೇ ಆಗಿದೆ. ನಾವು ಡಂಗೂರ ಸಾರುವುದಿಲ್ಲ. ಬಾಂಬ್, ಸ್ಫೋಟಕ ಸಿಡಿಸುವುದಿಲ್ಲ. ಬದಲಾಗಿ ಮನೆಮನೆಗಳಿಗೆ ಹೋಗಿ ಮನಮನಗಳಲ್ಲಿ ಕಮಲವನ್ನು ಅರಳಿಸುತ್ತೇವೆ. ಆದರೆ ಕಾಂಗ್ರೆಸ್ ಒಡೆದು ಆಳುವ ನೀತಿಯ ಮೂಲಕ ಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ಸೇ ಒಡೆದು ಹೋಗಿದೆ. ಆದರೆ ಬಿಜೆಪಿ ಒಂದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು
ಇಡೀ ರಾಜ್ಯದಲ್ಲಿ ಬಿಜೆಪಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಬೆಳೆದಿದೆ. ದೇಶದಲ್ಲಿ ಪರಿವರ್ತನೆ ಕಾಣಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ಆದ್ದರಿಂದ ‘ಬೂತ್ ವಿಜಯ ಅಭಿಯಾನ’, ‘ವಿಜಯ ಸಂಕಲ್ಪ ಅಭಿಯಾನ’ದ ಮೂಲಕ ಅಧಿಕಾರವನ್ನು ಹಿಡಿಯಬೇಕಿದೆ ಎಂದು ತಿಳಿಸಿದರು.
ಜನವರಿ 12ರವರೆಗೆ ಬೂತ್ ವಿಜಯ ಅಭಿಯಾನ ನಡೆಯಲಿದೆ. ಈ 10 ದಿನಗಳಲ್ಲಿ ಬೂತ್ ಕಮಿಟಿ ಬಲಪಡಿಸುವ, ಪೇಜ್ ಪ್ರಮುಖ್ ಸರಿಪಡಿಸುವ, ವಾಟ್ಸ್ ಆಪ್ ಗ್ರೂಪ್ ರಚಿಸುವ, ಒಂದು ಬೂತ್ ಮಟ್ಟದಲ್ಲಿ ಕನಿಷ್ಠ 25 ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯುತ್ತದೆ ಎಂದು ವಿವರಿಸಿದರು.
‘ವಿಜಯ ಸಂಕಲ್ಪ ಅಭಿಯಾನ’ವು ಜನವರಿ 21ರಿಂದ 29ರವರೆಗೆ ನಡೆಯಲಿದೆ. ಈ ವೇಳೆ ಮನೆ-ಮನೆಗಳಲ್ಲಿ ಬಿಜೆಪಿಯ ಯೋಜನೆಗಳ ಪ್ರಚಾರ, ‘ನಮ್ಮ ಮನೆ ಬಿಜೆಪಿ ಮನೆ’ ಸ್ಟಿಕ್ಕರ್ ಅಭಿಯಾನ, ಪ್ರತೀ ಬೂತ್ಗಳಲ್ಲಿ ಗೋಡೆ ಬರಹ, ಸದಸ್ಯತನ ಅಭಿಯಾನ, ಪ್ರತೀ ಬೂತ್ಗಳಲ್ಲಿ ಫಲಾನುಭವಿಗಳ ಸಂಪರ್ಕ ಮಾಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.